ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ವತಿಯಿಂದ ಕುಂದಾಪ್ರ ಕನ್ನಡ ಭಾಷೆ ಮಾತನಾಡುವ ವ್ಯಾಪ್ತಿಯಲ್ಲಿನ ಜನಪ್ರತಿನಿಧಿಗಳನ್ನು ಗೌರವಿಸುವ ಮೀಟ್ – ಗ್ರೀಟ್ ಕಾರ್ಯಕ್ರಮ ಆಗಸ್ಟ್ 6ರಂದು ಸಂಜೆ 6ರಿಂದ 8ರ ತನಕ ಕುಂದಾಪುರ ಸಹನಾ ಮಿನಿ ಹಾಲ್‌ನಲ್ಲಿ ನಡೆಯಲಿದೆ.
ಮೀಟ್ – ಗ್ರೀಟ್ ಕಾರ್ಯಕ್ರಮದ ಅಧ್ಯಕ್ಷರಾಗಿ ನಮ್ಮ ಕುಂದಾಪ್ರ ಕನ್ನಡ ಬಳಗದ ಅಧ್ಯಕ್ಷ ಸಾಧನದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರುಗಳಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಮ್.ಸುಕುಮಾರ ಶೆಟ್ಟಿ, ರಘುಪತಿ ಭಟ್, ಸುನೀಲ್ ಕುಮಾರ್ ಆಗಮಿಸಲಿದ್ದಾರೆ.
ದುಬೈನಲ್ಲಿ ಕುಂದಾಪ್ರ ಕನ್ನಡದ ಕಂಪನ್ನು ಪಸರಿಸುವ ಜೊತೆಗೆ ಹತ್ತಾರು ಕಾರ್ಯಕ್ರಮಗಳನ್ನು ಸಂಘಟಿಸಿದ ಹೆಗ್ಗಳಿಕೆ ನಮ್ಮ ಕುಂದಾಪ್ರ ಕನ್ನಡ ಬಳಗದ್ದಾಗಿದೆ. ತಾಲೂಕಿನ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಸಂಕಷ್ಟದಲ್ಲಿರುವವರಿಗೆ ಸಹಾಯ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಕುಂದಾಪುರ ಭಾಷಿಗರನ್ನು ಒಗ್ಗೂಡಿಸುವುದು ಹಾಗೂ ಪರಸ್ಪರ ಭಾಂದವ್ಯ ಬೆಳೆಸುವುದು ಸಂಸ್ಥೆಯ ಧ್ಯೇಯವಗಿದೆ.
ಬೆಸುಗೆ ಫೌಂಡೇಶನ್ ಅಧ್ಯಕ್ಷ ವೆಂಕಟೇಶ ಕಿಣಿ, ಕತಾರ್ ಕನ್ನಡ ಸಂಘದ ದೀಪಕ್ ಕುಮಾರ್ ಶೆಟ್ಟಿ, ನಮ್ಮ ಕುಂದಾಪ್ರ ಕನ್ನಡ ಬಳಗದ ಗೌರವ ಸದಸ್ಯ ಶೀನ ದೇವಾಡಿಗ ಉಪಸ್ಥಿತರಿರಲಿದ್ದಾರೆ.
ನಮ್ಮ ಕುಂದಾಪ್ರ ಕನ್ನಡ ಸಂಸ್ಥೆಗೆ ವರದರಾಜ್ ಶೆಟ್ಟಿ ಪೋಷಕರಾಗಿದ್ದು, ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ ಹಾಗೂ ಮಣೆಗಾರ್ ಮೀರಾನ್ ಸಾಹೇಬ್ ಗೌರವಾಧ್ಯಕ್ಷರಾಗಿದ್ದಾರೆ. ದಿನೇಶ ದೇವಾಡಿಗ ಉಪಾಧ್ಯಕ್ಷರಾಗಿದ್ದು ಸುಧಾಕರ ಕಾರ್ಯದರ್ಶಿಗಳಾಗಿದ್ದಾರೆ. ಸುಜೀತ್ ಶೆಟ್ಟಿ ಖಜಾಂಚಿಯಾಗಿದ್ದಾರೆ.