ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೇಂದ್ರ ಸರಕಾರದ ಜನವಿರೋಧಿ ಆರ್ಥಿಕ ನೀತಿಯಿಂದಾಗಿ ಜನಸಾಮಾನ್ಯರು ಹೈರಾಣಾಗುವಂತೆ ಮಾಡಿದೆ. ಸಾಲ ಭಾದಿತ ರೈತ ಕೂಲಿ ಕಾರ್ಮಿಕರು ಜೀವನ ಸಾಗಿಸುವುದು ಕಷ್ಟದಾಯಕವಾಗಿದೆ. ಸರಕಾರದಿಂದ ಕೂಲಿ ಕಾರ್ಮಿಕರಿಗೆ ಸರಿಯಾದ ಭದ್ರತೆ ಇಲ್ಲ. ಸರಕಾರ ಉದ್ಯೋಗ, ವಸತಿ, ನಿವೇಶನ ನೀಡಲು ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಮುಖಂಡ ಸುರೇಶ ಕಲ್ಲಾಗರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಬಂದೂರು ತಹಶೀಲ್ದಾರರ ಕಛೇರಿ ಎದುರು ಕರ್ನಾಟಕ ಪ್ರಾಂತ್ಯ ರೈತ ಸಂಘ, ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ದಲಿತ ಹಕ್ಕುಗಳ ಸಮಿತಿ ಕರ್ನಾಟಕ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ, ಕರ್ನಾಟಕ ಅದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಕಾರ್ಮಿಕ ಸಂಘ, ರೈತರು, ಕೂಲಿಕಾರ್ಮಿಕರ ಸಂಘ ಇದರ ವತಿಯಿಂದ ಕೂಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ನಡೆದ ಬ್ರಹತ್ ಪ್ರತಿಟನೆ ಹಾಗೂ ಜೈಲ್ ಭರೋ ಚಳುವಳಿಯಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿzರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಲೋಕಸಭಾ ಚುನಾವಣೆಯಲ್ಲಿ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸದೇ ಗಾಳಿಗೆ ತೂರಿದೆ. ಬದಲಾಗಿ ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ಭೂಮಾಲಕರ ಪರವಾದ ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದಿರುವ ಅದೇ ಹಳಸಲು ಜಾಗತೀಕರಣದ ನೀತಿಗಳನ್ನು ಮತ್ತಷ್ಟು ವೇಗವಾಗಿ ಈ ಸರ್ಕಾರ ಜಾರಿಗೆ ತರುತ್ತಿದೆ. ರೈತರ ಆತ್ಮಹತ್ಯೆಗಳು ನಿಲ್ಲಲಿದೆ, ರೈತರು ಬೆಳೆದ ಬೆಳೆಗಳಿಗೆ ಅದರ ಒಟ್ಟು ಉತ್ಪಾದನಾ ವೆಚ್ಚಕ್ಕೆ ಶೇ.೫೦ ಲಾಭಾಂಶ ಸೇರಿಸಿ ಬೆಂಬಲ ಬೆಲೆ ನೀಡಲಾಗುವುದು, ನೀರಾವರಿ ವಿದ್ಯುತ್ ಸಮಸ್ಯೆ ನಿವಾರಣೆ ಮಾಡಲಾಗುವುದು ಹಾಗೂ ಪ್ರತೀ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಠಿಸಲಾಗುವುದು ಎಂಬಿತ್ಯಾದಿ ನೀಡಿದ ಭರವಸೆಗಳಲ್ಲಿ ಒಂದನ್ನೂ ಮಾಡಲಾಗದೇ ದೇಶದ ಜನತೆಯ ನಂಬಿಕೆಗೆ ವಿಶ್ವಾಸದ್ರೋಹ ಮಾಡಲಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭ ರಾಜ್ಯ ಮುಖಂಡ ಕೆ. ಶಂಕರ, ಕರ್ನಾಟಕ ಪ್ರಾಂತ್ಯ ಕೂಲಿ ಕಾರ್ಮಿಕರ ಸಂಘದ ಕಾರ್ಯದರ್ಶಿ ವೆಂಕಟೇಶ ಕೋಣಿ, ರಾಜೀವ ಪಡುಕೋಣೆ, ಸಂತೋಷ ಹೆಮ್ಮಾಡಿ, ಆಶಾ ಕಾರ್ಯಕರ್ತೆ ಮುಖಂಡರಾದ ಶಿಲಾವತಿ, ಗಣೇಶ ತೊಂಡೆಮಕ್ಕಿ ಮೊದಲಾದವರು ಹಾಜರಿದ್ದರು. ಬೆಳಿಗ್ಗೆ ಬೈಪಾಸಿನಿಂದ ಪೇಟೆ ಮಾರ್ಗವಾಗಿ ವಿವಿಧ ಕಾರ್ಮಿಕ ಸಂಘಟನೆಯ ನೂರಾರು ಸದಸ್ಯರು ರ‍್ಯಾಲಿಯಲ್ಲಿ ಸಾಗಿಬಂದರು. ನಂತರ ತಹಶೀಲ್ದಾರರ ಕಛೇರಿ ಎದುರು ಪ್ರತಿಭಟಿಸುತ್ತಿದ್ದ ಕೂಲಿ ಕಾರ್ಮಿಕ ಸಂಘದ ವಿವಿಧ ಮುಖಂಡರನ್ನು ಪೋಲಿಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.