ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಧ್ಯೇಯಘೋಷದೊಂದಿಗೆ ಮಹಾತ್ಮಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ದೇಶದಾದ್ಯಂತ ಚಳುವಳಿ ನಡೆಸಿದಂತೆ ಇಂದು ಅಪಪ್ರಚಾರವನ್ನೇ ಬಂಡವಾಳವಾಗಿಟ್ಟುಕೊಂಡು ಗೊಂದಲ ಸೃಷ್ಟಿಸುವ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ವಿರುದ್ದ ಆಡಳಿತ ಬಿಟ್ಟು ತೊಲಗಿ ಎಂಬ ಆಂದೋಲನ ಆರಂಭಿಸಬೇಕಾಗಿದೆ ಎಂದು ಬೈಂದೂರು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.
ಬೈಂದೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯ 75ನೇ ವರ್ಚಾಚರಣೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ. ಕಾಂಗ್ರೇಸ್ ಪಕ್ಷ ಯಾರನ್ನೂ ಕಡೆಗಣಿಸಿಲ್ಲ. ಸರ್ವ ಸಮಾನತೆಗಾಗಿ ಒಂದು ಸಿದ್ಧಾಂತದ ಜತೆಗೆ ಹಿಂದಿನಿಂದಲೂ ಹೋರಾಟ ಮಾಡುತ್ತಾ ಬಂದಿದೆ. ಇಂದಿನ ಯುವ ಪೀಳಿಗೆಗೆ ಕಾಂಗ್ರೆಸ್ ಸಾಧನೆ ನೆನಪಿಲ್ಲ, ಕಾಂಗ್ರೆಸ್ ಕಾರ್ಯಕರ್ತರು ಯುವ ಪೀಳಿಗೆಗೆ ಪಕ್ಷದ ಸಾಧನೆಯನ್ನು ನೆನಪಿಸುವಂತಹ ಕಾರ್ಯ ಮಾಡಬೇಕಾಗಿದೆ ಎಂದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಮೋದಿ ಸರ್ಕಾರ ಖಾಸಗೀಕರಣದತ್ತ ಒಲವು ವ್ಯಕ್ತಪಡಿಸುತ್ತಿದೆ, ದೇಶದಲ್ಲಿ ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ಬಹುತೇಕ ಎಲ್ಲಾ ರಂಗದಲ್ಲಿಯೂ ಆಡಳಿತ ವ್ಯವಸ್ಥೆ ಕುಸಿದಿದೆ. ಆದರೆ ಪ್ರಚಾರದಲ್ಲಿ ಮಾತ್ರ ಅವರು ಮುಂದಿದ್ದಾರೆ. ಸುಳ್ಳಿನ ಕಂತೆಗಳನ್ನು ಹೇಳುತ್ತಾ ಯುವಜನರನ್ನು ತಪ್ಪು ದಾರಿಗೆ ಎಳೆಯುವುದಲ್ಲದೇ ಜಾತಿ, ಧರ್ಮದ ಹೆಸರಿನಲ್ಲಿ ದೇಶ ಆಳುತ್ತಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಇವರಲ್ಲಿ ಧರ್ಮರಕ್ಷಣೆಯ ಬಗ್ಗೆ ಕೇಳಿದರೆ ಯಾರಲ್ಲಿಯೂ ಸಮರ್ಪಕ ಉತ್ತರವಿಲ್ಲ. ಇಂತಹ ಜನರನ್ನು ಸಾಧ್ಯವಾದಷ್ಟು ದೂರವಿಡಿ ಎಂದು ಕಾರ್ಯಕರ್ತರಿಗೆ ಕರೆನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನಕುಮಾರ್ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಎಂ. ಕರಣಾನಿಧಿ ನಿಧನಕ್ಕೆ ಸಭೆಯಲ್ಲಿ ಶೋಕ ವ್ಯಕ್ತಪಡಿಸಿ ನುಡಿನಮನ ಸಲ್ಲಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ಎಂ. ನಾಗರಾಜ ಗಾಣಿಗ ಬಂಕೇಶ್ವರ, ಮಾಜಿ ಅಧ್ಯಕ್ಷ ವಾಸುದೇವ ಯಡಿಯಾಳ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಪಿ. ಎಲ್. ಜೋಸ್ ಮತ್ತಿತರರು ಉಪಸ್ಥಿತರಿದ್ದರು. ಯಡ್ತರೆ ಗ್ರಾಪಂ ಸದಸ್ಯ ಗಣೇಶ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.