ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಬೈಂದೂರು 2017-18ನೇ ಸಾಲಿನಲ್ಲಿ 44.66 ಲಕ್ಷ ರೂ. ಲಾಭಗಳಿಸಿ ಸದಸ್ಯರಿಗೆ ಶೇ.13 ಡಿವಿಡೆಂಟ್ ಘೋಷಿಸಿದೆ. ಹಿಂದಿನ ಆರ್ಥಿಕ ವರ್ಷಗಳಿಗಿಂತ ಸಂಸ್ಥೆಯು ಉತ್ತಮ ಪ್ರಗತಿ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.
ಭಾನುವಾರ ಬೈಂದೂರಿನ ಸಂಘದ ಪ್ರಧಾನ ಕಛೇರಿಯಲ್ಲಿ ಜರುಗಿದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸಹಕಾರಿಯು 2017-18ನೇ ಸಾಲಿನಲ್ಲಿ ರೂ. 11.59 ಕೋಟಿ ಠೇವಣಿ ಹೊಂದಿದ್ದು 11.25 ಕೋಟಿ ಸಾಲ ನೀಡಿ ಆರ್ಥಿಕ ವರ್ಷದಲ್ಲಿ ಸುಮಾರು 43 ಕೋಟಿಯಷ್ಟು ವಹಿವಾಟು ನಡೆಸಿದೆ.
ಕಳೆದ ಸಾಲಿನ ಕಾರ್ಯಯೋಜನೆಯಲ್ಲಿ ನಿಗದಿಪಡಿಸಿದ ಠೇವಣಿ, ಸಾಲ, ಅನುತ್ಪಾದಕ ಸಾಲ, ಸುಸ್ತಿ ಸಾಲ ಹಾಗೂ ಮುಂಗಡ ಲಾಭಗಳಿಕೆಯಲ್ಲಿ ನಿಗದಿತ ಗುರಿಯನ್ನು ಮೀರಿ ಸಂಸ್ಥೆ ಮುನ್ನಡೆಯುತ್ತಿದ್ದರೇ, ಗ್ರಾಹಕರ ಸಹಕಾರ, ನಿಧಿಗಳ ಸಮರ್ಪಕ ನಿರ್ವಹಣೆ, ಸಾಲಗಳ ವಿತರಣೆ ಹಾಗೂ ಸಮಯೋಜಿತ ಹೂಡಿಕೆಗಳಿಂದಾಗಿ ಸಂಘವು ನಿರೀಕ್ಷೆಗೂ ಮೀರಿದ ಪ್ರಗತಿ ಸಾಧಿಸಿದೆ. ಆಡಿಟ್ ವರ್ಗೀಕರಣದಲ್ಲಿ ಸಂಸ್ಥೆ ’ಎ’ ತರಗತಿಯನ್ನು ಹೊಂದಿದೆ ಎಂದರು.
ಸಹಕಾರಿಯ ಆರ್ಥಿಕ ವರ್ಷದಲ್ಲಿ ಹಮ್ಮಿಕೊಂಡ ವಿವಿಧ ಕಾರ್ಯಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಈ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ವೈದ್ಯಕೀಯ ನೆರವು, ವಿವಿಧ ಕಾರ್ಯಕ್ರಮಗಳಿಗೆ ಧನಸಹಾಯ ಮಾಡಿ ಸಾಮಾಜದ ಏಳಿಗೆಗೂ ಶ್ರಮಿಸುತ್ತಿದೆ ಎಂದರು.
ಶೇ. 100ರಷ್ಟು ವಸೂಲಾತಿ ಮಾಡಿರುವ ಸಂಸ್ಥೆಯ ಗೊಳಿಹೊಳೆ ಶಾಖೆಯ ಪ್ರಬಂಧಕ ರಾಘವೇಂದ್ರ ಹಾಗೂ ಸಿಬ್ಬಂಧಿಗಳನ್ನು ಗೌರವಿಸಲಾಯಿತು. ಸೌಹಾರ್ದ ಸಹಕಾರಿಯ ವ್ಯಾಪ್ತಿಯಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆರ್ಥಿಕ ನೆರವು ನೀಡಲಾಯಿತು.
ಸಂಘದ ಉಪಾಧ್ಯಕ್ಷ ವಿನಾಯಕ ರಾವ್, ನಿರ್ದೇಶಕರುಗಳಾದ ಮಂಜು ಪೂಜಾರಿ ನಾವುಂದ, ನಾಗಪ್ಪ ಪೂಜಾರಿ, ಪ್ರಶಾಂತ್ ಪೂಜಾರಿ, ಶಿವರಾಮ ಪೂಜಾರಿ, ಅಣ್ಣಪ್ಪ ಪೂಜಾರಿ. ರತಿ ರಾಜು ಪೂಜಾರಿ ಉಪಸ್ಥತರಿದ್ದರು.
ಸಹಕಾರಿಯ ಸದಸ್ಯ ಲಕ್ಷ್ಮೀನಾರಾಯಣ ವೈದ್ಯ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ ಪಿ. ಯಡ್ತರೆ ವಾರ್ಷಿಕ ವರದಿ ವಾಚಿಸಿದರು. ನಾವುಂದ ಶಾಖಾ ಪ್ರಬಂಧಕ ಶ್ರೀನಿವಾಸ ಪೂಜಾರಿ ಧನ್ಯವಾದಗೈದರು. ನಾಗೂರು ಶಾಖಾ ಪ್ರಬಂಧಕ ರಾಜೇಂದ್ರ ದೇವಾಡಿಗ ಸಹಕರಿಸಿದರು.