ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದಲ್ಲಿ ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಪಕ್ಷಗಳು ಕರೆ ನೀಡಿದ್ದ ಭಾರತ್ ಬಂದ್‌ಗೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಕುಂದಾಪುರ ಪೇಟೆ, ಬೈಂದೂರು ಪೇಟೆ ಸೇರಿದಂತೆ ಪ್ರಮುಖ ಜನನಿಬಿಡ ಸ್ಥಳಗಳಲ್ಲಿ ಬಂದ್ ಯಶಸ್ವಿಯಾಗಿದ್ದರೇ ಗ್ರಾಮೀಣ ಭಾಗಗಳಲ್ಲಿ ಜನಜೀವನ ಎಂದಿನಂತೆಯೇ ಸಾಗಿತ್ತು. ಖಾಸಗಿ ಹಾಗೂ ಸರಕಾರಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಸಂಘಟನೆಗಳಿಗೆ ಸೇರಿದ್ದ ರಿಕ್ಷಾ ಹಾಗೂ ಇತರ ಬಾಡಿಗೆ ವಾಹನಗಳು ಬಂದ್ ಬೆಂಬಲಿಸಿ ರಸ್ತೆಗೆ ಇಳಿದಿರಲಿಲ್ಲ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಾರಿ, ಟ್ರಕ್ ಹಾಗೂ ಪ್ರವಾಸಿ ವಾಹನಗಳ ಓಡಾಟ ಎಂದಿನಂತೆ ಇರುವುದು ಕಂಡುಬಂತು. ಕುಂದಾಪುರದಲ್ಲಿ ಭಾಗಶಃ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದು ಕಂಡುಬಂತು. ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ವಿದ್ಯಾರ್ಥಿಗಳ ಓಡಾಟವಿರಲಿಲ್ಲ. ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು ತೆರೆದಿದ್ದರು ಜನಸಂಚಾರ ವಿರಳವಾಗಿತ್ತು.
ಕುಂದಾಪುರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮೆರವಣಿಗೆ ನಡೆಸಿ ಅಂಗಡಿ, ಮುಗ್ಗಟ್ಟು ಹಾಗೂ ವಾಣಿಜ್ಯ ಬ್ಯಾಂಕ್ ಬಂದು ಮಾಡುವಂತೆ ಕೇಳಿಕೊಂಡರು. ಬಲವಂತದ ಬಂದ್ ಆಕ್ಷೇಪಿಸಿ ಬಿಜೆಪಿ ಕಾರ್ಯಕರ್ತರು ಮಳಿಗೆಗಳನ್ನು ಪುನಹ ತೆರೆಯಲು ಮನವಿ ಮಾಡಿದ್ದರಿಂದ ಬೆರಳೆಣಿಕೆ ಅಂಗಡಿಗಳು ಹಾಗೂ ವಾಣಿಜ್ಯ ಬ್ಯಾಂಕ್‌ಗಳು ಪುನಹಾ ವಹಿವಾಟು ಆರಂಭಿಸಿತು. ಕೋಟೇಶ್ವರದಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಿಸಲು ಮುಂದಾದಾಗ ಅಂಗಡಿ ಮಾಲೀಕರು ಹಾಗೂ ಕಾಂಗ್ರೆಸ್ ಕಾರ‍್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಆಗಮಿಸಿದ ಡಿಎಸ್ಪಿ ಬಿ.ಪಿ.ದಿನೇಶ್ ಕೂಮಾರ್ ಗುಂಪುಗಟ್ಟಿದ್ದ ಜನರ ಚದುರಿಸಿ, ಬಲವಂತದ ಬಂದ್ ಮಾಡಿಸದಂತೆ ಎಚ್ಚರಿಕೆ ನೀಡಿದರು.
ಬೈಂದೂರಿನಲ್ಲಿ ಪ್ರತಿಭಟನೆ:
ಬೈಂದೂರು ಬೈಪಾಸ್ ಬಳಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಲಾಯಿತು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನಕುಮಾರ್ ಉಪ್ಪುಂದ, ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಮುಖಂಡ ಎಸ್. ರಾಜು ಪೂಜಾರಿ, ಕಾರ್ಯದರ್ಶಿ ನಾಗರಾಜ ಬಂಕೇಶ್ವರ, ಜಿ.ಪಂ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯರಾದ ಜಗದೀಶ್ ದೇವಾಡಿಗ, ಗ್ರೀಷ್ಮಾ ಬಿಡೆ, ಪ್ರಮೀಳಾ ದೇವಾಡಿಗ, ಯುವಮೋರ್ಚಾ ಅಧ್ಯಕ್ಷರುಗಳಾದ ಶೇಖರ ಪೂಜಾರಿ, ಸತೀಶ್ ದೇವಾಡಿಗ, ಮುಖಂಡರುಗಳಾದ ವಾಸುದೇವ ಯಡಿಯಾಳ್, ರಿಯಾಜ್ ಅಹಮ್ಮದ್, ಮೋಹನ ಪೂಜಾರಿ, ಬೈಂದೂರು ಜೆಡಿಎಸ್ ಮುಖಂಡರಾದ ಸಂದೇಶ್ ಭಟ್, ರವಿ ಶಟ್ಟಿ ನಿತಿನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರದಲ್ಲಿ ಪ್ರತಿಭಟನೆ:
ಶಾಸ್ತ್ರಿ ವೃತ್ತದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿ, ತೈಲ ಬೆಲೆ ಇಳಿಸಲು ಒತ್ತಾಯಿಸಿತು. ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಪುರಸಭೆಯ ಸದಸ್ಯರಾದ ನಿತ್ಯಾಂದ ಕೆ.ಜಿ, ದೇವಕಿ ಪಿ. ಸಣ್ಣಯ್ಯ, ಚಂದ್ರಶೇಖರ ಖಾರ್ವಿ, ಶ್ರೀಧರ ಶೇರುಗಾರ, ಪಕ್ಷದ ಪ್ರಮುಖರಾದ ಜೇಕಬ್ ಡಿಸೋಜಾ, ವಿಕಾಸ್ ಹೆಗ್ಡೆ, ಹಾರೂನ್ ಸಾಹೇಬ್, ಹರಿಪ್ರಸಾದ್ ಶೆಟ್ಟಿ ಬಿದ್ಕಲ್‌ಕಟ್ಟೆ, ಚಂದ್ರ ಎ ಅಮೀನ್, ಗಣೇಶ್ ಶೇರುಗಾರ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಪೊಲೀಸರೊಂದಿಗೆ ಮಾತಿನ ಚಕಮಕಿ:
ಕುಂದಾಪುರ ಹಾಗೂ ಬೈಂದೂರಿನಲ್ಲಿ ಪೊಲೀಸರೊಂದಿಗೆ ಪ್ರತಿಭಟನಾ ನಿರತರ ಮಾತಿನ ಚಕಮಕಿ ನಡೆಯಿತು. ರಸ್ತೆ ತಡೆ ಮಾಡಲು ಅವಕಾಶ ನೀಡದ ಪೊಲೀಸರ ಹಾಗೂ ೧೦ ನಿಮಿಷವಾದರೂ ರಸ್ತೆ ತಡೆ ನಡೆಸಿಯೇ ಸಿದ್ಧ ಎಂದು ಕಾರ್ಯಕರ್ತರುಗಳ ನಡುವೆ ವಾಗ್ವಾದಗಳು ನಡೆಯಿತು. ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದ ಪೊಲೀಸರು ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದರು.