ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪುಂದ ಮೂರ್ತೆದಾರರ ಸೇವಾ ಸಹಕಾರಿ ಸಂಘವು ಆರ್ಥಿಕ ವರ್ಷದಲ್ಲಿ 14.25ಕೋಟಿ ರೂ. ಠೇವಣಿ ಸಂಗ್ರಹಿಸಿ, 11.23 ಕೋಟಿ ರೂ. ಸಾಲ ನೀಡಿ ಒಟ್ಟು 53ರೂ. ಕೋಟಿಯಷ್ಟು ವ್ಯವಹಾರ ನಡೆಸಿದ್ದು ವಾರ್ಷಿಕ 26.84 ಲಕ್ಷ ರೂ. ಲಾಭಗಳಿಸಿದೆ. ಸಂಘದ ಸದಸ್ಯರಿಗೆ ಶೇ.15ರ ಡಿವಿಡೆಂಟ್ ವಿತರಿಸಲಾಗುತ್ತಿದೆ. ಆಡಿಟ್ ವರ್ಗೀಕರಣದಲ್ಲಿ ‘ಎ’ ದರ್ಜೆಯನ್ನು ಪಡೆದುಕೊಂಡಿದೆ ಎಂದು ಅಧ್ಯಕ್ಷ ಮೋಹನ ಪೂಜಾರಿ ಹೇಳಿದರು.
ಅವರು ಉಪ್ಪುಂದ ಶಾಲೆಬಾಗಿಲು ಮಾತೃಶ್ರೀ ಸಭಾಭವನದಲ್ಲಿ ಶುಕ್ರವಾರ ಜರುಗಿದ ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ. ಉಪ್ಪುಂದ ಇದರ 2017-18ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸ್ಥೆಯ ಶ್ರೇಯೋಭಿವೃದ್ಧಿ ಹಾಗೂ ವಿಸ್ತರಿಸುವ ಜವಾಬ್ದಾರಿ ಅದರ ಪ್ರತಿ ಸದಸ್ಯರದ್ದೂ ಆಗಿದ್ದು, ಒಗ್ಗಟ್ಟಾಗಿ ಮುನ್ನಡೆದಾಗ ಮಾತ್ರ ಅದು ಸಾಧ್ಯವಾಗಲಿದೆ. ಸಮುದಾಯದ ಜನರಿಗೆ ಉತ್ತಮ ಸೇವೆ ಒದಗಿಸುವುದರ ಮೂಲಕ ಸಂಸ್ಥೆಯು ಸಮಾಜದ ಸ್ವತ್ತಾಗಲು ಶ್ರಮವಹಿಸಬೇಕಿದೆ. ಮುಂದಿನ ಆರ್ಥಿಕ ವರ್ಷಗಳಲ್ಲಿ ಸಂಘದ ಪ್ರಧಾನ ಕಛೇರಿಗೆ ನೂತನ ಸಹಕಾರಿ ಕಟ್ಟಡ ನಿರ್ಮಾಣ, ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಶಾಖೆ ತೆರೆಯುವುದು, ವಿದ್ಯಾರ್ಥಿಗಳು ಹಾಗೂ ಸಂಘದ ಸದಸ್ಯರಿಗೆ ನೆರವು ಇವುಗಳ ಜೊತೆಗೆ ಸಂಸ್ಥೆಯಲ್ಲಿ ಠೇವಣಿ ಹಾಗೂ ಸಾಲವನ್ನು ಹೆಚ್ಚಿಸಿ ಗರಿಷ್ಠ ಲಾಭ ಗಳಿಸುವ ಗುರಿಯನ್ನು ಹೊಂದಿದ್ದೇವೆ ಎಂದರು.
ಸಂಘದ ಉಪಾಧ್ಯಕ್ಷರಾದ ತಿಮ್ಮಪ್ಪ ಪೂಜಾರಿ, ನಿರ್ದೇಶಕರುಗಳಾದ ಹೆಚ್. ನರಸಿಂಹ ಪೂಜಾರಿ, ಬಿ. ನಾರಾಯಣ ಪೂಜಾರಿ, ಎಂ. ಮಂಜು ಪೂಜಾರಿ, ರಾಜು ಪೂಜಾರಿ ಕೆರ್ಗಾಲು, ಶೇಷು ಪೂಜಾರಿ, ಸುರೇಶ್ ಪೂಜಾರಿ, ಸಂತೋಷ, ಶಾರದಾ, ಲಕ್ಷ್ಮೀ ಉಪಸ್ಥಿತರಿದ್ದರು.
ಈ ಸಂದರ್ಭ ಹಿಂದಿನ ಆಡಳಿತ ಮಂಡಳಿಯ ಸದಸ್ಯರುಗಳನ್ನು ಸನ್ಮಾನಿಸಲಾಯಿತು. ಸಂಘದ ಪ್ರಧಾನ ವ್ಯವಸ್ಥಾಪಕ ಮಹೇಶ್ ಎಚ್. ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು.