ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಶನಿವಾರ ಸಂಜೆ ಬೈಂದೂರು ಸರಕಾರಿ ಪರಿಶಿಷ್ಟ ವರ್ಗದ ಆಶ್ರಮ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದಕ್ಕೂ ಮುನ್ನ ಹಳ್ಳಿಹೊಳೆ ಗ್ರಾಮದ ಬಾಚಗುಳಿ ಕೊರಗ ಕಾಲೋನಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ವಸತಿ, ಕುಡಿಯುವ ನೀರು ಸೇರಿದಂತೆ ಪ್ರಮುಖ ವಿಚಾರಗಳ ಕುರಿತಾಗಿ ಚರ್ಚಿಸಿದರು.
ಬಳಿಕ ಆಶ್ರಮ ಶಾಲೆಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನವನ್ನು ವೀಕ್ಷಿಸಿ ಆಶ್ರಮದ ಕೊಠಡಿ, ಶೌಚಾಲಯ, ಅಡುಗೆಮನೆಯನ್ನು ಪರಿಶೀಲಿಸಿ, ಸ್ವಚ್ಛತೆಯ ಬಗ್ಗೆ ಗಮನ ಹರಿಸುವಂತೆ ಆದೇಶಿಸಿದರು.
ಮಕ್ಕಳೊಂದಿಗೆ ಊಟ: ರಾಜ್ಯ ಸರಕಾರದ ಆದೇಶದಂತೆ ವಸತಿ ಶಾಲೆ ವೀಕ್ಷಣೆಗೆ ಬಂದಿದ್ದ ಡಿಸಿ ಅವರು ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಊಟವನ್ನು ಸವಿದರು. ಕೊಚ್ಚಿಗೆ ಅಕ್ಕಿ ಅನ್ನ, ತರಕಾರಿ ಸಾರಿನೊಂದಿಗೆ ಬಂಗಡೆ ಮೀನಿನ ಪ್ರೈ ಸಿದ್ಧಪಡಿಸಲಾಗಿತ್ತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕಿರಣ್ ಫಡ್ನೇಕರ್, ಬೈಂದೂರು ತಹಶೀಲ್ದಾರ್ ಕಿರಣ ಗೌರಯ್ಯ, ಐಟಿಡಿಪಿ ಅಧಿಕಾರಿ ವಿಶ್ವನಾಥ್, ಕುಂದಾಪುರ ಸಮಾಜ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಬಿ.ಎಸ್ ಮಾದರ್, ರಾಘವೇಂದ್ರ, ಆಶ್ರಮ ಶಾಲೆಯ ಸಿಬ್ಬಂಧಿಗಳು ಇದ್ದರು.