ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ವರ್ಷ ಹಾಗೂ ಸೋದರಿ ನಿವೇದಿತಾರಿಗೆ 150 ಸಂದಿರುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಂತ ಹಮ್ಮಿಕೊಂಡಿರುವ ರಥಯಾತ್ರೆ ಸೆ.೩೦ರಂದು ಬೈಂದೂರಿಗೆ ಆಗಮಿಸಲಿದ್ದು, ವಿಶಿಷ್ಟವಾಗಿ ಸ್ವಾಗತಿಸಿಕೊಳ್ಳಲಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೈಂದೂರು ಪ್ರಖಂಡದ ಅಧ್ಯಕ್ಷ ಶ್ರೀಧರ ಬಿಜೂರು ಹೇಳಿದರು.
ಅವರು ಯುವ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆಯ ಪೂರ್ವಭಾವಿಯಾಗಿ ಭಾನುವಾರ ಬೈಂದೂರು ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾದ ಸಿದ್ಧತಾ ಸಭೆಯಲ್ಲಿ ಮಾತನಾಡಿ ಮಾಹಿತಿ ನೀಡಿದರು.
ಸೆ.30ರ ಮಧ್ಯಾಹ್ನ 3 ಗಂಟೆಗೆ ತಲ್ಲೂರಿನಲ್ಲಿ ರಥಯಾತ್ರೆಯನ್ನು ಸ್ವಾಗತಿಸಿಕೊಳ್ಳಲಾಗುತ್ತದೆ. ಅಲ್ಲಿಂದ ನೂರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರು ಯಡ್ತರೆಯ ತನಕ ಸಾಗಿಬರಲಿದ್ದಾರೆ. ಯಡ್ತರೆಯಲ್ಲಿ ಶೋಭಾಯಾತ್ರೆಗೆ ಚಾಲನೆ ನೀಡಿದ ಬಳಿಕ ಚಂಡೆ ವಾದ್ಯದೊಂದಿಗೆ ಸಾಗಿಬಂದ ತರುವಾಯ ಬೈಂದೂರು ಶಾರದಾ ವೇದಿಕೆಯಲ್ಲಿ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.
ಪೂರ್ವಭಾರಿ ಸಭೆಯಲ್ಲಿ ಯುವ ಬ್ರಿಗೇಡ್‌ನ ನಿರಂಜನ್ ತಲ್ಲೂರು, ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನ ಮೊಕ್ತೇಸರ ಚನ್ನಕೇಶವ ಉಪಾಧ್ಯಾಯ, ಜಿ.ಪಂ ಸದಸ್ಯ ಬಾಬು ಶೆಟ್ಟಿ ತಗ್ಗರ್ಸೆ, ತಾ.ಪಂ ಸದಸ್ಯ ಕರುಣ ಪೂಜಾರಿ, ಬಿ.ಎಸ್. ಸುರೇಶ್ ಶೆಟ್ಟಿ, ಪ್ರಸನ್ನಕುಮಾರ್ ಉಪ್ಪುಂದ, ಸುಧಾಕರ ಶೆಟ್ಟಿ ನೆಲ್ಯಾಡಿ, ಆಶಾ ಕಿಶೋರ್ ಹಾಗೂ ಸಂಘ ಪರಿವಾರದ ವಿವಿಧ ಘಟಕಗಳ ಪ್ರಮುಖರು ಇದ್ದರು.