ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮನುಷ್ಯನ ಆರೋಗ್ಯ ಅತಿ ಮುಖ್ಯವಾಗಿದ್ದು, ಅದನ್ನು ಕಾಪಾಡಿಕೊಳ್ಳುವುದು ಕೂಡ ಆತನ ಜವಾಬ್ದಾರಿ. ದೇಹದ ಎಲ್ಲಾ ಅಂಗಾಂಗಗಳು ಪ್ರಮುಖ್ಯತೆ ಹೊಂದಿದ್ದು, ಕಣ್ಣುಗಳು ಆ ಪೈಕಿ ಅಗ್ರಸ್ಥಾನದಲ್ಲಿದೆ. ಬದುಕಿದ್ದಾಗ ಅದರ ರಕ್ಷಣೆಯ ಜೊತೆಗೆ ಮರಣೋತ್ತರವೂ ಕಣ್ಣುಗಳು ಮತ್ತೊಬ್ಬರಿಗೆ ಬೆಳಕು ನೀಡುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದೂ ಆಗಿದೆ ಎಂದು ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಐ. ನಾರಾಯಣ ಹೇಳಿದರು.
ಅವರು ಶನಿವಾರ ತಗ್ಗರ್ಸೆ ಶ್ರೀ ಬ್ರಹ್ಮಲಿಂಗೇಶ್ವರ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಸವಿ ಸವಿ ನೆನಪು ಕಲಾ ಸಂಸ್ಥೆ ರಿ. ಕಳವಾಡಿ, ಶ್ರೀ ಮಾರಿಕಾಂಬಾ ಹವ್ಯಾಸಿ ಕಲಾ ತಂಡ ರಿ. ಕಳವಾಡಿ, ರೋಟರಿ ಕ್ಲಬ್ ಬೈಂದೂರು ಮೊದಲಾದ ಸಂಘಟನೆಗಳ ಸಹಯೋಗದೊಂದಿಗೆ ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ತಗ್ಗರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೊಕ್ತೇಸರ ಟಿ. ನಾರಾಯಣ ಹೆಗ್ಗೆ ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ್ ನೇತ್ರಾಲಯದ ವೈದ್ಯ ಡಾ. ಜಾಫರ್, ರೋಟರಿ ಬೈಂದೂರು ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಉಪ್ಪುಂದ, ಶಾಲಾ ಮುಖ್ಯೋಪಧ್ಯಾಯ ತಿಮ್ಮಪ್ಪ ಗಾಣಿಗ, ಎಸ್‌ಡಿಎಂಸಿ ಅಧ್ಯಕ್ಷ ಪ್ರಭಾಕರ ಗಾಣಿಗ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೆಂಕಟರಮಣ ದೇವಾಡಿಗ ಉಪಸ್ಥಿತರಿದ್ದರು.
ಬ್ರಹ್ಮಲಿಂಗೇಶ್ವರ ಫ್ರೆಂಡ್ಸ್‌ನ ಪ್ರಮೋದ್ ಆಚಾರ್ಯ ಸ್ವಾಗತಿಸಿದರು. ಸವಿ ಸವಿ ನೆನಪು ಕಲಾ ಸಂಸ್ಥೆಯ ಸತೀಶ್ ರಾಮಕುಮಾರ್ ನಿರೂಪಿಸಿ, ವಂದಿಸಿದರು.