ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗ್ರಾಮೀಣ ಭಾಗಗಳಲ್ಲಿ ಉದ್ಯಮಗಳ ಆರಂಭದಿಂದ ಉದ್ಯೋಗ ಸೃಷ್ಠಿ ಹಾಗೂ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗುತ್ತದೆ. ಆತ್ಮವಿಶ್ವಾಸ, ಕಠಿಣ ಪರಿಶ್ರಮ, ಪ್ರಾಮಾಣಿಕತೆ ಉದ್ಯಮದ ಯಶಸ್ಸಿಗೆ ಕಾರಣವಾಗಿದ್ದು, ಸ್ಥಳೀಯರ ಮತ್ತು ನೌಕರರ ಸಹಕಾರವೂ ಅಗತ್ಯ ಎಂದು ಉಪ್ಪುಂದ ಸುಮುಖ ಗ್ರೂಪ್ಸ್ ಆಫ್ ಇಂಡಸ್ಟ್ರೀಸ್‌ನ ಆಡಳಿತ ನಿರ್ದೇಶಕ ಬಿ. ಎಸ್. ಸುರೇಶ್ ಶೆಟ್ಟಿ ಹೇಳಿದರು.
ಕೆರ್ಗಾಲು ಗ್ರಾಮದ ನಾಯ್ಕನಕಟ್ಟೆಯಲ್ಲಿ ಆರಂಭಗೊಂಡ ಶುದ್ಧ ಕುಡಿಯುವ ನೀರಿನ ಘಟಕ ಶಾಂತೇರಿ ಬೊಟ್ಲಿಂಗ್ ಕಂಪೆನಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸಮೀಕ್ಷೆ ಪ್ರಕಾರ ಅಗತ್ಯವಿರುವ ಇಂಧನ, ಆಹಾರ ಹಾಗೂ ಶುದ್ದ ನೀರು ಸರಿಯಾದ ಪ್ರಮಾಣದಲ್ಲಿ ಸಿಗುತ್ತಿಲ್ಲ. ಈ ನೆಲೆಯಲ್ಲಿ ಇವುಗಳನ್ನು ಮಾರುಕಟ್ಟೆಗೆ ಪೂರೈಸುವಲ್ಲಿ ಉದ್ಯಮಿಗಳು ಯೋಚಿಸಬೇಕಾಗಿದೆ. ಉದ್ಯಮ ಕ್ಷೇತ್ರಕ್ಕೆ ಕಾಲಿಡುತ್ತಿರುವ ಯುವಜನತೆ ಸೋಲಿಗೆ ಹೆದರಿ ಪಲಾಯನ ಮಾಡದೇ ಧನಾತ್ಮಕ ಚಿಂತನೆ, ಧೈರ್ಯ ಮತ್ತು ಛಲದಿಂದ ಉದ್ಯಮಶೀಲ ಗುಣಗಳನ್ನು ಅಳವಡಿಸಿಕೊಂಡು ವ್ಯವಹರಿಸಿದಾಗ ಭವಿಷ್ಯದಲ್ಲಿ ಯಶಸ್ಸು ಕಾಣಬಹುದು ಎಂದರು.
ಕೆರ್ಗಾಲು ಗ್ರಾಪಂ ಅಧ್ಯಕ್ಷೆ ಸೋಮು ಅಧ್ಯಕ್ಷತೆ ವಹಿಸಿದ್ದರು. ಖಂಬದಕೋಣೆ ವಿಜಯಾ ಬ್ಯಾಂಕ್ ಶಾಖಾ ಪ್ರಬಂಧಕ ಸುನಿಲ್ ಕುಮಾರ್ ನೂತನ ಕಟ್ಟಡ ಹಾಗೂ ಉಪ್ಪುಂದ ಓಂ ಗಣೇಶ್ ಕಾಮತ್ ಸಮಾರಂಭ ಉದ್ಘಾಟಿಸಿದರು. ಗ್ರಾಪಂ ಉಪಾಧ್ಯಕ್ಷ ಸುಂದರ್ ಕೊಠಾರಿ ಶುಭಹಾರೈಸಿದರು. ಕಂಪೆನಿ ಪಾಲುದಾರರಾದ ವೀಣಾ ಶಶಿಧರ್ ಶೆಣೈ, ಪ್ರಾರ್ಥನಾ ನಾಗಪ್ರಸಾದ್ ನಾಯಕ್ ಉಪಸ್ಥಿತರಿದ್ದರು. ನಾಗಪ್ರಸಾದ್ ಸ್ವಾಗತಿಸಿ, ಕೆ. ಪುಂಡಲೀಕ ನಾಯಕ್ ಪ್ರಾಸ್ತಾವಿಸಿದರು. ಕೆ. ಬಾಲಕೃಷ್ಣ ಪ್ರಭು ವಂದಿಸಿದರು. ಎಚ್. ಉದಯ್ ಆಚಾರ್ಯ ನಿರೂಪಿಸಿದರು. ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಮತ್ತು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಘಟಕಕ್ಕೆ ಭೇಟಿನೀಡಿ ಉದ್ಯಮಕ್ಕೆ ಶುಭ ಕೋರಿದರು.