ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಾಹಿತ್ಯವೆಂಬುದು ಕೇವಲ ಮನೋರಂಜನೆಗಷ್ಟೇ ಸೀಮಿತವಾಗದೇ, ಶತಮಾನಗಳಿಂದ ತುಳಿತಕ್ಕೊಳಗಾದ ಜನಸಾಮಾನ್ಯರ ಧ್ವನಿಯಾಗಬೇಕು. ಜಾತಿ, ಮತ ಪಂಥಗಳ ಕುರಿತು ರಚಿತವಾದ ಅರಿವಿನ ಸಾಹಿತ್ಯ ಜನಸಾಮಾನ್ಯರ ತಿದ್ದಿ ನಡೆಯಲು ಪ್ರೇರಣೆಯಾಗಬೇಕು. ಕಾವ್ಯ ವ್ಯಕ್ತಿಗತವಾಗಿರದೇ ಸಾಮಾಜಿಕವಾಗಬೇಕು. ಮನಸ್ಸಿನ ನೆಮ್ಮದಿಗಾಗಿ ಕಾವ್ಯ ರಚಿಸದೇ ಮನಷ್ಯನ ಬದುಕನ್ನು ಅರಳಿಸುವ ಕೆಲಸಕ್ಕದು ಪ್ರೇರಣೆಯಾಗಬೇಕು ಎಂದು ಹಿರಿಯ ಸಾಹಿತಿ ಎಂ. ಜೆ. ದೇಶಪಾಂಡೆ ಹೇಳಿದರು.
ಅವರು ಭಾನುವಾರ ಉಪ್ಪುಂದದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ರೈತ ಸಿರಿ ಸಭಾ ಭವನದಲ್ಲಿ ಶ್ರೀಮತಿ ಲಕ್ಷ್ಮೀ ಶ್ರೀ ನಾಗಪ್ಪಯ್ಯ ನಾಯಕ್ ಸದ್ಭಾವನಾ ವೇದಿಕೆ ನಾಯ್ಕನಕಟ್ಟೆ, ಕುಂದ ಅಧ್ಯಯನ ಕೇಂದ್ರ ರಿ. ಉಪ್ಪುಂದ, ಸುವಿಚಾರ ಬಳಗ ರಿ. ಉಪ್ಪುಂದ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಸಾಹಿತಿ ಕೆ. ಪುಂಡಲೀಕ ನಾಯಕ್ ಅವರ ಕಿರುಗಜ್ಜೆ ಕವನ ಸಂಕಲನ ಅನಾವರಣ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಹಕಾರಿ ಕ್ಷೇತ್ರದಲ್ಲಿ ತನ್ನ ಬದುಕನ್ನು ಕಟ್ಟಿಕೊಂಡ ಪುಂಡಲೀಕ ನಾಯಕರು ತಮ್ಮ ನಿವೃತ್ತಿಯ ತರುವಾಯ ಕವಿತೆ ರಚನೆಗೆ ಆರಂಭಿಸಿ ಸಾಹಿತ್ತಿಕ ವಲಯದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಅವರು ಕಿರುಗೆಜ್ಜೆಯ ಮೂಲಕ ಉಪ್ಪುಂದಕ್ಕೆ ಕನ್ನಡದ ಗೆಜ್ಜೆ ಕಟ್ಟಿದ್ದಾರೆ. ಕಿರುಗೆಜ್ಜೆ ಮುಂದೆ ದೊಡ್ಡ ಸದ್ದು ಮಾಡಲಿ ಎಂದು ಹಾರೈಸಿದರು.
ಕೃತಿ ಅನಾವರಣಗೊಳಿಸಿದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಪುಂಡಲೀಕ ನಾಯಕರು ನಿವೃತ್ತಿಯ ನಂತರ ಕ್ರೀಯಾಶೀಲ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಉಪ್ಪುಂದ ಕುಂದ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಉಪ್ಪುಂದ ಚಂದ್ರಶೇಖರ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಬರಹಗಾರರ ಹಿತರಕ್ಷಣಾ ವೇದಿಕೆಯ ಉಪೇಂದ್ರ ಸೋಮಯಾಜಿ, ಸಾಹಿತಿ ರಮೇಶ್ ವೈದ್ಯ, ಬೈಂದೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ, ಸುವಿಚಾರ ಬಳಗದ ಅಧ್ಯಕ್ಷ ರಾಮಕೃಷ್ಣ ಶೇರಿಗಾರ್, ಶುಭದಾ ಶೈಕ್ಷಣಿಕ ಟ್ರಸ್ಟ್ ಅಧ್ಯಕ್ಷ ಡಾ. ಎನ್.ಕೆ ಬಿಲ್ಲವ, ಸಾಹಿತಿ ಓಂಗಣೇಶ್ ಉಪ್ಪುಂದ, ಪತ್ರಕರ್ತ ಯು.ಎಸ್ ಶೆಣೈ, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಎಚ್. ವಸಂತ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ವಾಗ್ಮಿ ಎಂ. ಗೋವಿಂದ ಪುಸ್ತಕ ಪರಿಚಯ ಮಾಡಿದರು. ಕೃತಿಕಾರ ಕೆ. ಪುಂಡಲೀಕ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಬೈಂದೂರು ಘಟಕ ಅಧ್ಯಕ್ಷ ರವೀಂದ್ರ ಎಚ್. ವಂದಿಸಿದರು. ಕನ್ನಡ ಉಪನ್ಯಾಸಕ ಉದಯ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.