ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳು, ರಾಷ್ಟ್ರೀಯತೆ, ಭದ್ರತೆ, ಹಾಗೂ ಆಡಳಿತಾತ್ಮಕ ವಿಚಾರದಲ್ಲಿ ಕೇಂದ್ರ ಸರಕಾರದ ಕಾರ್ಯವೈಖರಿಯನ್ನು ಇಟ್ಟುಕೊಂಡು ಈ ಭಾರಿಯ ಉಪಚುನಾವಣೆಯನ್ನು ಎದುರಿಸುತ್ತೇವೆ ಎಂದು ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶುಕ್ರವಾರ ಬೈಂದೂರಿನಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಹಿಂದಿನ ಹತ್ತು ವರ್ಷಗಳ ಅವಧಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಜಟ್ಟಿ, ಬಂದರು, ರಸ್ತೆ ಸೇರಿದಂತೆ ಲೋಕಸಭಾ ಸದಸ್ಯರ ಮೂಲಕ ಹತ್ತಾರು ಅಭಿವೃದ್ಧಿ ಕೆಲಸಗಳಾಗಿವೆ. ಈ ಭಾರಿಯೂ ಬಿಜೆಪಿ ಅಭ್ಯರ್ಥಿ ಬಿ. ವೈ ರಾಘವೇಂದ್ರ ಅವರನ್ನು ಜನರು ಬೆಂಬಲಿಸಲಿದ್ದು ಗೆಲುವು ನಿಶ್ಚಿತ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ತನ್ನ ಚಿಹ್ನೆಯನ್ನೇ ಅಡವಿಡುವ ದುಸ್ಥಿತಿ ಬಂದಿರುವುದು ವಿಷಾದನೀಯ. ಈ ಬೆಳವಣಿಗೆ ಕೈ ಚಿಹ್ನೆಗೆ ಮತ ಹಾಕುವ ಜನಸಾಮಾನ್ಯರಿಗೆ ಆತಂಕ ತಂದೊಡ್ಡಿದೆ. ಜೆಡಿಎಸ್ ಜತೆಗೆ ಬಿಜೆಪಿಯೂ ೨೦-೨೦ ಮ್ಯಾಚ್ ಆಡಿತ್ತು. ಆದರೆ ಕೊನೆಗೆ ಜೆಡಿಎಸ್ ಏನು ಮಾಡಿತು ಎಂಬುದು ರಾಜ್ಯದ ಜನತೆಗೆ ತಿಳಿದಿದೆ. ಕಾಂಗ್ರಸ್ ಪಕ್ಷದ ಅಸ್ತಿತ್ವವೇ ಅಲ್ಲಾಡುವ ದಿನ ಬಂದಿದೆ ಎಂದು ಅವರು ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಯಾರಂತಲೇ ಗೊತ್ತಿಲ್ಲ ಎಂದಿದ್ದಾರೆ. ಸದನದಲ್ಲಿ ನಿದ್ರೆ ಮಾಡಿದರೆ ಯಾವ ಶಾಸಕರ ಪರಿಚಯವೂ ಇರಲಾರದು. ಅತಿ ಹೆಚ್ಚು ಅಂತರದಿಂದ ೫ನೇ ಭಾರಿ ಗೆಲುವು ಸಾಧಿಸಿದ ಹಾಲಾಡಿ ಅವರ ಪರಿಚಯ ಇಲ್ಲ ಎಂದಿರುವ ಅವರಿಗೆ ನಿದ್ದೆರಾಮಯ್ಯ ಎಂದು ಜನರು ಟೀಕಿಸುವುದು ತಪ್ಪಲ್ಲ ಎಂದರು.0
ಉಡುಪಿ ಜಿಲ್ಲಾಧಿಕಾರಿಗಳು ರಾಜ್ಯದ ಮುಖ್ಯಮಂತ್ರಿಗಳ ಮಾತನ್ನೇ ಕೇಳುತ್ತಿಲ್ಲ. ಕರಾವಳಿಯ ಎಲ್ಲಾ ಶಾಸಕರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳೇ ಮರುಗಾರಿಕೆಯ ಮಾಡುವವರಿಗೆ ತೊಂದರೆ ಕೊಡಬೇಡಿ ಎಂದು ಮೌಖಿಕ ಆದೇಶ ನೀಡಿದ್ದರೂ, ಅವರ ಮಾತನ್ನು ಲೆಕ್ಕಿಸದೇ ಆದೇಶ ಬಂದಿಲ್ಲ ಎನ್ನುತ್ತಿದ್ದಾರೆ. ಮರಳುಗಾರಿಕೆ ನಿಲ್ಲಿಸಲು ಕಾನೂನು ಚೌಕಟ್ಟಿನೊಳಕ್ಕೆ ಏನೆಲ್ಲಾ ಮಾಡಬೇಕು ಎಂದು ತಿಳಿದಿರುವ ಡಿಸಿ ಅವರಿಗೆ ಪುನರಾರಂಭಿಸಲು ಏನು ಮಾಡಬೇಕೆಂದು ತಿಳಿದಿಲ್ಲವೇ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಜಿಲ್ಲಾ ಪ್ರಮುಖರಾದ ಕತ್ಯಾಡಿ ನವೀನ್ ಶೆಟ್ಟಿ, ಬೈಂದೂರು ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಕಾರ್ಯದರ್ಶಿ ದೀಪಕ್‌ಕುಮಾರ್ ಶೆಟ್ಟಿ, ಜಿ.ಪಂ ಸದಸ್ಯ ಸುರೇಶ್ ಬಟ್ವಾಡಿ, ಬೈಂದೂರು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರು ಮೊದಲಾದವರು ಇದ್ದರು.