ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದಲೇ ರಾಜ್ಯದಲ್ಲಿ ಹೆಸರು ಮಾಡಿದ್ದ ಐಪಿಎಸ್ ಅಧಿಕಾರಿ, ವಡ್ಡರ್ಸೆ ಮೂಲದ ಮಧುಕರ ಶೆಟ್ಟಿ (೪೯) ಡಿ.೨೮ರ ರಾತ್ರಿ ಹೈದರಾಬಾದಿನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಹೃದಯ ಸಂಬಂಧಿ ಖಾಯಿಲೆಯಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದದರು
ಮೂಲಗಳ ಮಾಹಿತಿ ಪ್ರಕಾರ ಮಧುಕರ್ ಶೆಟ್ಟಿ ಕಳೆದೊಂದು ವಾರದಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ತುರ್ತು ಚಿಕಿತ್ಸೆಯಲ್ಲಿದ್ದ ಅವರ ಆರೋಗ್ಯ ಸ್ಥಿತಿ ಚೇತರಿಸಿಕೊಳ್ಳದೇ ಕೊನೆಯುಸಿರೆಳೆದಿದ್ದಾರೆ.
ಮಧುಕರ ಶೆಟ್ಟಿ ಅವರ ಚಿಕಿತ್ಸೆಯ ಬಗ್ಗೆ ಖುದ್ದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ತೆಲಂಗಾಣ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕದ ಹಲವು ಐಪಿಎಸ್ ಅಧಿಕಾರಿಗಳು ಮಾಹಿತಿ ಪಡೆದುಕೊಳ್ಳುತ್ತಲೇ ಇದ್ದರು. ಕರ್ನಾಟಕ ಸರ್ಕಾರ ಸಿಐಡಿ ಎಡಿಜಿಪಿ ಪ್ರತಾಪ್ ರೆಡ್ಡಿಯವರನ್ನು ಚಿಕಿತ್ಸೆ ಮೇಲ್ವಿಚಾರಣೆಗೆ ನೇಮಿಸಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕರ್ನಾಟಕ ರಾಜ್ಯದಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರವನ್ನು ಮತ್ತು ಭ್ರಷ್ಟರನ್ನು ಬೇಟೆ ಮಾಡುತ್ತಿದ್ದ ಲೋಕಾಯುಕ್ತ ಸಂಸ್ಥೆಯಲ್ಲಿ ಖಡಕ್ ಅಧಿಕಾರಿ ಎನಿಸಿಕೊಂಡಿದ್ದ ಮಧುಕರ್ ಶೆಟ್ಟಿ ಶಾಸಕ ಸಂಪಂಗಿಯನ್ನು ಬಂಧಿಸಿ ವೃತ್ತಿನಿಷ್ಟೆ ಮೆರೆದಿದ್ದರು.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವಿರುದ್ಧ ಬೇಸರಗೊಂಡು ಉನ್ನತ ವಿದ್ಯಾಭ್ಯಾಸದ ರಜೆಯ ಮೇಲೆ ಮಧುಕರ್ ಶೆಟ್ಟಿ 2011ರಲ್ಲಿ ತೆರಳಿದ್ದರು. ಅದಾಗಿ ಬರೋಬ್ಬರಿ ಐದು ವರ್ಷಗಳ ಕಾಲ ಮಧುಕರ್ ಶೆಟ್ಟಿ ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಬಹಿರಂಗವಾಗಿಯೇ ಸಂತೋಷ್ ಹೆಗಡೆ ಅವರ ಮೇಲೆ ಅಸಮಾಧಾನವನ್ನು ಹೊರ ಹಾಕಿದ್ದರು. ಸಂತೋಷ್ ಹೆಗಡೆ ಕೆಲ ವಿಚಾರಗಳಲ್ಲಿ ತಾರತಮ್ಯ ಮಾಡುತ್ತಿದ್ದರು ಎಂಬ ಗಂಭೀರ ಆರೋಪವನ್ನು ಮಧುಕರ್ ಶೆಟ್ಟಿ ಮಾಡಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ನಂತರ ಐಜಿಪಿಯಾಗಿ ಬಡ್ತಿ ಪಡೆದ ಅವರು ಕೆಲ ಕಾಲ ಪೊಲೀಸ್ ನೇಮಕಾತಿ ವಿಭಾಗದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಅದಾದ ಕೆಲವೇ ದಿನಗಳಲ್ಲಿ ಕೇಂದ್ರ ಸೇವೆಗೆ ತೆರಳಿದ ಅವರು ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಧುಕರ್ ಶೆಟ್ಟಿ ಸಾಮಾಜಿಕ ಕಳಕಳಿ ಹೊಂದಿರುವ ಅಧಿಕಾರಿ ಎಂಬ ಹೆಸರನ್ನ ಜನಸಾಮಾನ್ಯರಿಂದ ಗಳಿಸಿರುವ ಅಧಿಕಾರಿ.
1999ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಮಧುಕರ್ ಶೆಟ್ಟಿ, ಕರ್ನಾಟಕದ ಉಡುಪಿ ಜಿಲ್ಲೆಯ ವಡ್ಡರ್ಸೆಯವರು. ಖ್ಯಾತ ಪತ್ರಕರ್ತ ದಿ. ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಪುತ್ರರಾದ ಮಧುಕರ ಅವರು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆಯುವ ಮುನ್ನ ಅವರು ದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ಸಮಾಜ ಶಾಸ್ತ್ರದಲ್ಲಿ ಎಮ್ ಎ ಮಾಡಿದ್ದಾರೆ.