ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕ ಮನೆಗೆ ತೆರಳುತ್ತಿದ್ದ ವೇಳೆ ಗದ್ದೆಯ ಅಂಚಿನಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಹಂಗಾರಕಟ್ಟೆ ನಿವಾಸಿ ಸುರೇಶ್ ತಿಂಗಳಾಯ (೩೭) ಮೃತ ದುರ್ದೈವಿ.
ಶುಕ್ರವಾರ ಸಂಜೆ ಸುರೇಶ್ ಶಾಲೆಯಿಂದ ಮನೆಗೆ ತನ್ನ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಹಂಗಾರಕಟ್ಟೆಯ ತಮ್ಮ ಮನೆಯ ಸಮೀಪದ ಗದ್ದೆಯಂಚಿನಲ್ಲಿ ಹೋಗುತ್ತಿರುವ ಸಂದರ್ಭ ಸ್ಕಿಡ್ ಆಗಿ ಗದ್ದೆಗೆ ಬಿದ್ದಿದ್ದಾರೆ. ಈ ಸಂದರ್ಭ ಕೆಸರು ಗದ್ದೆಯಲ್ಲಿ ಕವುಚಿ ಬಿದ್ದ ಪರಿಣಾಮ ಮೇಲೇಳಲಾರದೇ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಅವಿವಾಹಿತರಾಗಿರುವ ಸುರೇಶ್ ತಿಂಗಳಾಯ ಕಳೆದ ಹನ್ನೆರಡು ವರ್ಷಗಳಿಂದ ವೆಂಕಟರಮಣ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.
ತಮ್ಮ ಸ್ನೇಹಮಯ ವ್ಯಕ್ತಿತ್ವದ ಮೂಲಕ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ ಸುರೇಶ್ ಗುರುತಿಸಿಕೊಂಡಿದ್ದರು. ಶಾಲೆಯಲ್ಲಿ ಸಂತಾಪ ಸೂಚಕ ಸಭೆ ನಡೆಸಿ ರಜೆ ನೀಡಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.