ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗಿರೀಶ್ ಕಾರ್ನಾಡ್ ಅವರು ಕಲೆ ಸಾಹಿತ್ಯದ ವಿವಿಧ ಆಯಾಮಗಳಲ್ಲಿ ತೊಡಗಿಕೊಂಡದ್ದು ಮಾತ್ರವಲ್ಲದೇ ಅದಕ್ಕಾಗಿಯೇ ತಮ್ಮ ಬದುಕನ್ನು ಮೀಸಲಿರಿಸಿದ್ದರು. ದೇಶ ಭಾಷೆಯ ಬಗೆಗೆ ಅವರಲ್ಲಿ ಅಪಾರ ಒಲವಿತ್ತು. ಶೋಷಣೆಯಿಲ್ಲದ ಸೌಹಾರ್ದಯುತ ಸಮಾಜದ ನಿರ್ಮಾಣ ಅವರ ಗುರಿಯಾಗಿತ್ತು. ಕಾರ್ನಾಡರ ಕನಸುಗಳನ್ನು ಸಾಕಾರಗೊಳಿಸುವ ಜವಾಬ್ದಾರಿ ಯುವಜನರ ಮೇಲಿದೆ ಎಂದು ಸಮುದಾಯದ ರಾಜ್ಯ ಉಪಾಧ್ಯಕ್ಷ ಬಿ. ಎ. ಇಳಿಗೇರ ಹೇಳಿದರು.
ಅವರು ಭಾನುವಾರ ಸಮುದಾಯ ಕುಂದಾಪುರ ಸಂಘಟನೆಯು ಜೆಸಿಐ ಕುಂದಾಪುರ ಹಾಗೂ ಕಸಾಪ ಕೋಟೇಶ್ವರ ಹೋಬಳಿ ಸಹಯೋಗದೊಂದಿಗೆ ಇಲ್ಲಿನ ಜೆಸಿಐ ಭವನದಲ್ಲಿ ಆಯೋಜಿಸಿದ ಕಥಾ ಓದು – 25 ಹಾಗೂ ಕಾರ್ನಾಡರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ನಾಡರು ಟೀಕೆಗಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ. ಶೊಷಿತರ ಪರ ಸದಾ ನಿಲ್ಲುತ್ತಿದ್ದರು. ಸಾರ್ವಭೌಮತೆಗೆ ವಿರುದ್ಧವಾಗಿ ಕಂಡದ್ದನ್ನು ಪ್ರತಿಭಟಿಸುತ್ತಿದ್ದರು. ಬದುಕಿನಲ್ಲಿ ಅಂದುಕೊಂಡಂತೆ ನಡೆದರು. ಬದುಕು ಮುಗಿಸಿದ ಮೇಲೆಯೂ ಅದೇ ಸರಳತೆ ಮೆರೆದರು. ಅವರದ್ದೊಂದು ಮೇರು ವ್ಯಕ್ತಿತ್ವ ಎಂದು ಬಣ್ಣಿಸಿದರು.
ಜೆಸಿಐ ಕುಂದಾಪುರದ ಅಧ್ಯಕ್ಷ ಅಶೋಕ್ ತೆಕ್ಕಟ್ಟೆ, ಸಮುದಾಯ ಕುಂದಾಪುರ ಉಪಾಧ್ಯಕ್ಷ ವಾಸುದೇವ ಗಂಗೇರ, ಕಾರ್ಯದರ್ಶಿ ಸದಾನಂದ ಬೈಂದೂರು ವೇದಿಕೆಯಲ್ಲಿದ್ದರು. ಸಮುದಾಯ ಕುಂದಾಪುರದ ಅಧ್ಯಕ್ಷ ಉದಯ ಗಾವಂಕರ ಸ್ವಾಗತಿಸಿ ರವೀಂದ್ರ ಕೋಡಿ ವಂದಿಸಿದರು. ಉದಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಮುದಾಯದ ಕಲಾವಿದರಿಂದ ವಾಸುದೇವ ಗಂಗೇರ ನಿರ್ದೇಶನದಲ್ಲಿ ಗಿರೀಶ್ ಕಾರ್ನಾಡರ ತಲೆದಂಡ ಹಾಗೂ ಆಡಾಡ್ತ ಆಯುಷ್ಯ ಆಯ್ದ ತುಣುಕುಗಳ ಓದು, ರೂಪಕ ಪ್ರದರ್ಶಿಸಲಾಯಿತು.
ಸಮುದಾಯ ಕುಂದಾಪುರ ಪ್ರತಿ ತಿಂಗಳ ಒಂದು ಶನಿವಾರ ಆಯೋಜಿಸುತ್ತಿರುವ ಕಥಾ ಓದು ೨೫ ತಿಂಗಳಿಗೆ ಬಂದು ತಲುಪಿದೆ. ಇಲ್ಲಿ ಓದಿಗಿಂತ ಮುಖ್ಯವಾದದ್ದು ಎಲ್ಲರೂ ಸೇರಿ ಮಾತನಾಡುವುದಾಗಿತ್ತು. ಟಿ.ವಿ, ಸಾಮಾಜಿಕ ಜಾಲತಾಣಗಳಿಂದಾಗಿ ನಮ್ಮದೇ ಆದ ಖಾಸಗಿ ಪ್ರಪಂಚದಲ್ಲಿ ತೇಲಾಡುತ್ತಿರುವ ಹೊತ್ತಿನಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಮಾತು, ಚರ್ಚೆ, ಆಸ್ವಾದನೆ ಆಗಬೇಕು ಎಂಬ ಕಾರಣಕ್ಕೆ ಕಥಾ ಓದು ಆರಂಭಿಸಿದೆವು. ಇಷ್ಟರ ತನಕ ಹಲವಾರು ಜನರು ನಮ್ಮನ್ನು ಸೇರಿಕೊಂಡಿದ್ದಾರೆ – ಉದಯ ಗಾವಂಕಾರ