ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ : ಹೆತ್ತವರು ಧನ್ಯತಾ ಭಾವವನ್ನು ಕಾಣುವಂತೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಪರಿವರ್ತನೆಯ ಪ್ರವರ್ಧಮಾನ ಕಾಲದಲ್ಲಿ ಮನುಷ್ಯ ತನ್ನ ತನವನ್ನು ಕಳೆದುಕೊಳ್ಳುವ ಸ್ಥಿತಿಯತ್ತ ಹೆಚ್ಚು ವಾಲುತ್ತಿದ್ದಾನೆ. ಜೀವನದ ಪ್ರಾರಂಭದಿಂದ ಕೊನೆಯ ಕ್ಷಣದವರೆಗೂ ವಿದ್ಯಾರ್ಥಿಯಾಗಿರುವವರು ಮಾತ್ರ ಸಾಧನೆ ಉತ್ತುಂಗ ತಲುಪುತ್ತಾರೆ. ಜೀವನದಲ್ಲಿ ಏರಿಳಿತಗಳು ಇದ್ದಾಗ ಮಾತ್ರ ಬದುಕು ಸಾರ್ಥಕಗೊಳ್ಳುತ್ತದೆ. ಜೀವನದಲ್ಲಿ ಕಾಣುವ ಪ್ರತಿಯೊಂದು ಏರಿಳಿತಗಳನ್ನು ಸಂಯಮ ಹಾಗೂ ಸಮಚಿತ್ತದಿಂದ ಸ್ವೀಕಾರ ಮಾಡಬೇಕು ಎಂದು ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಡಾ.ಜಿ.ಭೀಮೇಶ್ವರ ಜೋಷಿ ಹೇಳಿದರು.
ಇಲ್ಲಿನ ಬಸ್ರೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ಮಂಗಳವಾರ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ನಡೆದ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ೮೫ ನೇ ಹುಟ್ಟುಹಬ್ಬದ ಆಚರಣೆ, ದತ್ತಿನಿಧಿ ವಿತರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಡಾ.ಎಂ.ಮೋಹನ್‌ಆಳ್ವ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಬಸ್ರೂರು ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೂಡಬಿದಿರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್‌ಆಳ್ವ, ಪ್ರಶಸ್ತಿಗಳನ್ನು ಬೇರೆಯವರಿಗೆ ನೀಡುವುದು ಸಂತೋಷದ ಕೆಲಸ ಆದರೆ ಪ್ರಶಸ್ತಿಗಳನ್ನು ಸ್ವೀಕರಿಸುವುದು ತುಂಬಾ ಕಷ್ಟದ ಕೆಲಸ. ಐಶ್ವರ್ಯ ಹಾಗೂ ಹೆಸರಿನ ಉದ್ದೇಶಗಳನ್ನು ಇಟ್ಟುಕೊಂಡು ಕೆಲಸ ಮಾಡಬಾರದು, ನಿಸ್ವಾರ್ಥ ಭಾವದಿಂದ ಕೆಲಸವನ್ನು ಮಾಡುವುದರಿಂದ ಐಶ್ವರ್ಯ ಹಾಗೂ ಹೆಸರು ಹುಡುಕಿಕೊಂಡು ಬರುತ್ತದೆ ಎಂದರು.
ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಮೂಡಬಿದಿರಿ ಅಧ್ಯಕ್ಷತೆ ವಹಿಸಿದ್ದರು. ಜಯಶ್ರೀ ಕೆ.ಅಮರನಾಥ ಶೆಟ್ಟಿ, ಬಸ್ರೂರು ಅಪ್ಪಣ್ಣ ಹೆಗ್ಡೆ, ನಾಗರತ್ನ ಅಪ್ಪಣ್ಣ ಹೆಗ್ಡೆ, ಬಾಂಡ್ಯಾ ಸುಭಾಶ್ಚಂದ್ರ ಶೆಟ್ಟಿ, ಡಾ.ಸುಶಾಂತ ರೈ, ರಾಮ್‌ರತನ್‌ಹೆಗ್ಡೆ, ಪ್ರೀತಮ್‌ರೈ, ನಿರುಪಮಾ ಹೆಗ್ಡೆ, ದಿವ್ಯಾ ಆರ್‌ಹೆಗ್ಡೆ, ಮೋಹಿನಿ ಹೆಗ್ಡೆ ಇದ್ದರು.
ಮೂಡಬಿದಿರೆ ಆಳ್ವಾಸ್‌ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್‌ಆಳ್ವ ಅವರಿಗೆ ಬಸ್ರೂರು ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿಯನ್ನು ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಡಾ.ಜಿ.ಭೀಮೇಶ್ವರ ಜೋಷಿ ಪ್ರದಾನ ಮಾಡಿದರು. ‘ಪೂರ್ಣ ಜೀವನ’ ಕೃತಿ ಬಿಡುಗಡೆ ಮಾಡಲಾಯ್ತು. ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಶಿಕ್ಷಣ ಹಾಗೂ ಆರೋಗ್ಯ ದತ್ತಿನಿಧಿಯನ್ನು ಬಿ.ಅಪ್ಪಣ್ಣ ಹೆಗ್ಡೆ ಫಲಾನುಭವಿಗಳಿಗೆ ಸಾಂಕೇತವಾಗಿ ವಿತರಿಸಿದರು. ಮೊಮ್ಮಕ್ಕಳಾದ ಅಶ್ವಿನಿ ಎಸ್‌ಶೆಟ್ಟಿ, ಶಿವಾನಿ ಎಸ್‌ಶೆಟ್ಟಿ, ಶ್ರಾವ್ಯ, ಶ್ರೀಶಾ, ಶ್ಲೋಕ, ವೈಷ್ಣವಿ ಅಪ್ಪಣ್ಣ ಹೆಗ್ಡೆಯವರ ೮೫ ನೇ ಹುಟ್ಟು ಹಬ್ಬವನ್ನು ವಿಶಿಷ್ಠವಾಗಿ ಆಚರಿಸಿದರು.
೩ನೇ ಹಣಕಾಸು ಆಯೋಗದ ಅಧ್ಯಕ್ಷ ಎ.ಜಿ.ಕೊಡ್ಗಿ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ ಎಂ ಶೆಟ್ಟಿ, ಶ್ರೀ ಕ್ಷೇತ್ರ ಕೊಲ್ಲೂರಿನ ಹಿರಿಯ ಅರ್ಚಕ ಡಾ.ಎನ್.ನರಸಿಂಹ ಅಡಿಗ, ಮಾಜಿ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಹಿರಿಯಣ್ಣ ಹಾಗೂ ಕಂಚಿ ಕಾಮಕೋಟಿ ಶಂಕರಾಚಾರ್ಯ ಶ್ರೀ ಮಠದ ಪರವಾಗಿ ಅಪ್ಪಣ್ಣ ಹೆಗ್ಡೆಯವರನ್ನು ಅಭಿನಂದಿಸಲಾಯಿತು.
ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಟ್ರಸ್ಟಿ ಅನುಪಮಾ ಎಸ್‌ಶೆಟ್ಟಿ ಸ್ವಾಗತಿಸಿದರು, ಪ್ರತಿಷ್ಠಾನದ ಅಧ್ಯಕ್ಷ ರಾಮ್‌ಕಿಶನ್‌ಹೆಗ್ಡೆ ವರದಿ ಮಂಡಿಸಿದರು, ಪತ್ರಕರ್ತ ಯು.ಎಸ್.ಶೆಣೈ ಪ್ರಾಸ್ತಾವಿಕ ಮಾತನಾಡಿದರು, ಸಾಹಿತಿ ಕೋ.ಶಿವಾನಂದ ಕಾರಂತ ಅಭಿನಂದನಾ ಪತ್ರ ವಾಚಿಸಿದರು, ನಿವೃತ್ತ ಮುಖ್ಯ ಶಿಕ್ಷಕ ದಿನಕರ ಶೆಟ್ಟಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸಂದೇಶ ಓದಿದರು. ಆರ್‌ಜೆ ನಯನಾ ನಿರೂಪಿಸಿದರು, ನಿವೃತ್ತ ಪ್ರಾಂಶುಪಾಲ ಕೆ.ರಾಧಾಕೃಷ್ಣ ಶೆಟ್ಟಿ ವಂದಿಸಿದರು.