ಸುನಿಲ್ ಹೆಚ್. ಜಿ., | ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕುಂದಾಪುರದ ಕೋಡಿ ಕಡಲ ಕಿನಾರೆ ಬಣ್ಣಗಳಿಂದ ಕಳೆಗಟ್ಟಿತ್ತು. ಕಲಾವಿದನ ಕೈಚಳಕ, ಕಸುಬುದಾರನ ಉತ್ಪನ್ನ, ರುಚಿಯಾದ ಖಾದ್ಯ, ವಿಹಾರ – ಅರಿವಿನೊಂದಿಗೆ, ಸಾಂಸ್ಕೃತಿಕ ಲೋಕದ ಅನಾವರಣ. ಅಲ್ಲೊಂದು ವಿಶೇಷ; ಘನ ಉದ್ದೇಶದೊಂದಿಗೆ ಜೊತೆಯಾಗಿತ್ತು.
ಇವೆಲ್ಲವೂ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ನೇತೃತ್ವದಲ್ಲಿ ಎಸ್‌ಎಫ್‌ಎಲ್ ಇಂಡಿಯಾ, ಗೀತಾನಂದ ಫೌಂಡೇಶನ್ ಮಣೂರು, ಮಾತಾ ಅಮೃತಾನಂದಮಯಿ ಸಂಸ್ಥೆ, ಸಾಧನ ಕಲಾಸಂಗಮ ಕುಂದಾಪುರ, ಎನ್.ಹೆಚ್-66 ಸೇರಿದಂತೆ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಕ್ಲೀನ್ ಕುಂದಾಪುರ ಪ್ರೊಜೆಕ್ಟ್ ೫೦ನೇ ವಾರ ಪೂರೈಸಿದ ನಿಮಿತ್ತ ಶನಿವಾರ ಕೋಡಿ ಕಡಲ ಕಿನಾರೆಯಲ್ಲಿ ಆಯೋಜಿಸಲಾದ ಪ್ಲಾಸ್ಟಿಕ್ ಮುಕ್ತ ಬೀಚ್ ಉತ್ಸವ ನಿರ್ವಾಣ 2020ರಲ್ಲಿ ಕಂಡ ದೃಶ್ಯಕಾವ್ಯಗಳು.
ಅಲ್ಲಿ ಪ್ಲಾಸ್ಟಿಕ್ ಬಳಸದೇ ತಯಾರಿಸಿದ ಡಿಸೈನ್ ಡಿಸೈನ್‌ನಲ್ಲಿ ಹಾಳೆ ತಟ್ಟೆಗಳು, ಪ್ಲೇಟ್, ಹೂಕುಂಡ, ಪೆನ್, ಪೆನ್ಸಿಲ್, ಮನೆ ಅಲಂಕಾರಿಕಾ ವಸ್ತುಗಳು, ಪರಿಸರ ಸ್ನೇಹಿ ಬ್ಯಾಗ್, ಖಾದಿ ಬಟ್ಟೆಗಳು, ಮೊಬೈಲ್ ಕವರ್, ಪಾಕೇಟ್, ಬೆತ್ತ-ಬಿದಿರಿನಿಂದ ತಯಾರಿಸಿ ವಿವಿಧ ಕರಕುಶಲ ವಸ್ತುಗಳು ನೋಡುಗರ ಕುತೂಹಲ ಗರಿಗೆದರುವಂತೆ ಮಾಡಿದ್ದವು. ಕುಂದಾಪ್ರ ಡಾಟ್ ಕಾಂ ವರದಿ.
ವೇಸ್ಟ್ ಚಪ್ಪಲಿ ಬಳಸಿ ನಿರ್ಮಿಸಿದ ಸೆಲ್ಫಿ ಪಾಯಿಂಟ್, ವೀನು, ಬಿಸಾಡಿದ ಬಾಟಲಿಗಳಲ್ಲಿ ಅರಳಿದ ಕಲೆ, ಮರಳು ಶಿಲ್ಪ, ಮೀನುಗಾರರ ಬದುಕಿನ ಚಿತ್ರಣ ಎಲ್ಲವೂ ಗಮನ ಸೆಳೆದರೆ; ಘಮ ಘಮ ಬಿರಿಯಾನಿ, ಮೀನು ಪ್ರೈ, ತಿಂಡಿ ತಿನಿಸು, ವಿದೇಶಿ ಯುವಕರು ತಯಾರಿಸಿ ಜರ್ಮನ್ ಚರುಮುರಿ ಬಾಯಲ್ಲಿ ನಿರೂರಿಸುತ್ತಿದ್ದವು. ಕುಂದಾಪುರ ಪರಿಸರದ ವಿವಿಧ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವದ ಮೆರಗು ಹೆಚ್ಚಿಸಿದ್ದವು. ಕುಂದಾಪ್ರ ಡಾಟ್ ಕಾಂ ವರದಿ.
Watch Video
ಉತ್ಸವಕ್ಕೆ ಚಾಲನೆ:
ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಕುಂದಾಪುರ ಎಸಿ ಕೆ. ರಾಜು ಹಾಗೂ ಎಎಸ್ಪಿ ಹರಿರಾಮ್ ಶಂಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ಜನ ಜೀವನದೊಟ್ಟಿಗೆ ಹಾಸುಹೊಕ್ಕಾದ ಪ್ಲಾಸ್ಟಿಕ್ ನಿರ್ಮೂಲನೆ ಅಸಾಧ್ಯವಾದರೂ ಬಳಕೆ ಕಡಿಮೆ ಮಾಡಲು ಸಾಧ್ಯವಿದೆ. ಪ್ಲಾಸ್ಟಿಕ್ ಒಂದೇ ಅಲ್ಲದೆ, ಪ್ರಕೃತಿಯಲ್ಲಿ ಕರಗದೇ ಇರುವ ಅನೇಕ ಪರಿಸರ ಮಾರಕ ವಸ್ತುಗಳಿದ್ದು, ಅವುಗಳಿಂದಾಗುವ ದುಷ್ಪರಿಣಾಂದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಆದಷ್ಟು ಪರಿಸರ ಮಾರಕ ವಸ್ತುಗಳಿಂದ ದೂರ ಇರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಕುಂದಾಪುರ ಉಪವಿಭಾಗಾಧಿಕಾರಿ ರಾಜು ಮೊಗವೀರ ಮಾತನಾಡಿ, ಪ್ಲಾಸ್ಟಿಕ್ ನಿರ್ಮೂಲನೆ ಸಂಪೂರ್ಣ ಆಗದಿದ್ದರೂ ಬಳಕೆ ಪ್ರಮಾಣ ಕಡಿಮೆ ಮಾಡಲು ಖಂಡಿತ ಸಾಧ್ಯವಿದೆ. ಪ್ಲಾಸ್ಟಿಕ್‌ನಿಂದ ಪರಿಸರದ ಮೇಲಾಗುವ ಪರಿಣಾಮದ ಬಗ್ಗೆ ಸರಕಾರ ಅರಿವು ಮೂಡಿಸುತ್ತಲೇ ಇದೆ. ನದಿ ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ಹಾಕುವುದರಿಂದ ಜಲಚರಗಳ ಮೇಲೂ ಪರಿಣಾಮ ಬೀರಿ ಮೀನು ಸಂತತಿ ಕೂಡ ಕ್ಷೀಣಿಸುತ್ತಿದೆ. ಈ ಬಗ್ಗೆ ಜಾಗೃತಿ ವಹಿಸುವುದು ಅಗತ್ಯ ಎಂದರು. ಕುಂದಾಪ್ರ ಡಾಟ್ ಕಾಂ ವರದಿ.
ಎಎಸ್‌ಪಿ ಹರಿರಾಮ್ ಶಂಕರ್ ಮಾತನಾಡಿ, ಕ್ಲೀನ್ ಕುಂದಾಪುರ ಪ್ರೊಜೆಕ್ಟ್ ಸ್ವಚ್ಛತಾ ಕಾರ‍್ಯಕ್ರಮದಲ್ಲಿ ನಾನು ಮತ್ತು ಪತ್ನಿ ಪಾಲ್ಗೊಂಡಿದ್ದು, ನಂತರ ಪೊಲೀಸ್ ಇಲಾಖೆ ಸಹಕಾರದಲ್ಲಿ ಸ್ಚಚ್ಛತಾ ಕಾರ‍್ಯಕ್ರಮ ಭಾಗವಹಿಸಿದ್ದು ಖುಷಿ ನೀಡಿತ್ತು. ನದಿ, ಸಮುದ್ರ ಪ್ರವಾಸಿ ತಾಣಗಳು ಮಲೀನವಾಗುತ್ತಿದ್ದು, ಅಂತಹ ಪರಿಸರದಲ್ಲಿ ಪರಿಸರ ಜಾಗೃತಿ ಮೂಡಿಸುವ ಜನಾಂದೋಲನ ಆಗಬೇಕಿದೆ. ಕೋಡಿ ಕಡಲ ಕಿನಾರೆ ಅಭಿವೃದ್ಧಿ, ಸುರಕ್ಷತೆ ದೃಷ್ಟಿಯಿಂದ ಶಾಸಕರೊಂದಿಗೆ ಈಗಾಗಲೇ ಚರ್ಚಿಸಿದ್ದು, ಲೈಟಿಂಗ್ ಹಾಗೂ ಸಿಸಿಟಿವಿ ಆಳವಡಿಕೆ ಮಾಡಿಲಾಗುತ್ತದೆ ಎಂದರು. ಕುಂದಾಪ್ರ ಡಾಟ್ ಕಾಂ ವರದಿ.
ಭಾರತೀಯ ರೆಡ್‌ಕ್ರಾಸ್‌ನ ಕುಂದಾಪುರ ಘಟಕದ ಸಭಾಪತಿ ಜಯಕರ್ ಶೆಟ್ಟಿ, ಅನಂತಾ ಹರಿರಾಮ್, ಕುಂದಾಪುರದ ರೈಲ್ವೇ ಪ್ರಯಾಣಿಕರ ಹಿತ ರಕ್ಷಣಾ ಸಮಿತಿಯ ವಿವೇಕ್ ಕಾಮತ್, ಗಣೇಶ್ ಪುತ್ರನ್, ಗೋಪಾಡಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಜಿ. ಪುತ್ರನ್, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಉತ್ಸವದ ಸಂಘಟನಾ ಸಮಿತಿಯ ಡಾ| ರಶ್ಮಿ ಕುಂದಾಪುರ, ಕಲ್ಪನಾ ಭಾಸ್ಕರ್, ಭರತ್ ಬಂಗೇರ, ಅನುದೀಪ್ ಹೆಗ್ಡೆ, ಅರುಣ್, ಶಕುಂತಳಾ, ಶ್ರೇಯಾ, ಶ್ರದ್ಧಾ, ಲೋಹಿತ್ ಬಂಗೇರ, ಶಿವರಾಮ ಶೆಟ್ಟಿ, ಆಶಾ ಶೆಟ್ಟಿ, ಶಶಿಧರ, ಆದ್ಯಂತ್, ಅಭಿನಂದನ್, ರಕ್ಷಾ, ಸಚಿನ್ ನಕ್ಕತ್ತಾಯ, ಅನಿಲ್ ಕುಮಾರ್ ಶೆಟ್ಟಿ, ವಿಖ್ಯಾತ್, ಸುವಿತ್, ಅವೀಶ್, ಶ್ರೀ ಚರಣ್ ಮೊದಲಾದವರು ಉಪಸ್ಥಿತರಿದ್ದರು. ರವಿಕಿರಣ್ ಕಾರ‍್ಯಕ್ರಮ ನಿರೂಪಿಸಿದರು.