ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಹಾಲಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ಈಶ್ವರ ಹಕ್ಲತೋಡು ಆಯ್ಕೆಗೊಂಡರು.
ಬುಧವಾರ ಸಂಘದ ಮುಖ್ಯ ಕಛೇರಿಯಲ್ಲಿ ಜರುಗಿದ ಆಯ್ಕೆ ಪ್ರಕ್ರಿಯೆಯಲ್ಲಿ ಇಬ್ಬರೂ ಅವಿರೋಧವಾಗಿ ಚುನಾಯಿತರಾದರು. ಕೃಷಿ ಇಲಾಖೆಯ ಅಧಿಕಾರಿ ಶಂಕರ ಶೇರ್ವೆಗಾರ್ ಚುನಾವಣಾಧಿಕಾರಿ ಆಗಿದ್ದರು.
ಈ ಸಂದರ್ಭ ನಿರ್ದೇಶಕರಾದ ಗುರುರಾಜ ಹೆಬ್ಬಾರ್, ನಾಗರಾಜ ಖಾರ್ವಿ, ಮಂಜು ದೇವಾಡಿಗ, ಮೋಹನ ಪೂಜಾರಿ, ರಘುರಾಮ ಶೆಟ್ಟಿ, ಸುರೇಶ ಶೆಟ್ಟಿ, ದಿನಿತಾ ಶೆಟ್ಟಿ, ಜಲಜಾಕ್ಷಿ, ಭರತ ದೇವಾಡಿಗ, ವೀರೇಂದ್ರ ಶೆಟ್ಟಿ, ಹೂವ ನಾಯ್ಕ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮೇಲ್ವಿಚಾರಕ ವಿಠಲ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ ಪೈ ಇದ್ದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ನಿರ್ದೇಶಕರು ಮತ್ತು ಸಿಬ್ಬಂದಿ ಅಭಿನಂದಿಸಿದರು.
ರೈತರ ಸೇವೆಯೇ ಪ್ರಥಮ ಆದ್ಯತೆ:
ಆಯ್ಕೆ ಪ್ರಕ್ರಿಯೆ ಬಳಿಕ ಮಾತನಾಡಿದ ಪ್ರಕಾಶ್ಚಂದ್ರ ಶೆಟ್ಟಿ ಇಪ್ಪತ್ತೆರಡು ವರ್ಷಗಳಿಂದ ಅಧ್ಯಕ್ಷನಾಗಿದ್ದೇನೆ. ಈ ಬಾರಿ ಶೇ. 97 ಸದಸ್ಯರು ನಮಗೆ ಮತ ನೀಡಿ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ. ನಿರ್ದೇಶಕರು ಇನ್ನೂ ಐದು ವರ್ಷ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ನಷ್ಟದಲ್ಲಿದ್ದ ಸಂಘವನ್ನು ಎಲ್ಲರ ಸಹಕಾರದಿಂದ ಮೇಲೆತ್ತಲಾಗಿದೆ. ಈಗ ರೂ 4 ಕೋಟಿ ಲಾಭ ಗಳಿಸುತ್ತಿದೆ. ರೂ 1.5 ಕೋಟಿ ನೀಡಿ ಕೆರ್ಗಾಲು ಗ್ರಾಮದಲ್ಲಿ ಜಮೀನು ಖರೀದಿಸಲಾಗಿದೆ ಅಲ್ಲಿ ರೈತರ ಸರ್ವ ಸರಕಿನ, ಸರ್ವ ಸೇವೆಯ ಕೇಂದ್ರ ನಿರ್ಮಿಸುವುದು ನಮ್ಮ ಮುಂದಿರುವ ಆದ್ಯತೆ. ಗ್ರಾಮವಾಸಿಗಳಿಗೆ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಬೇಕು. ಅವರಿಗೆ ಇಲ್ಲಿಯೇ ಉದ್ಯೋಗ ದೊರೆತು, ವಲಸೆ ಹೋಗುವುದು ನಿಲ್ಲಬೇಕು ಎಂಬ ಆಶಯ ನಮ್ಮದು. ಮುಂದಿನ ಅವಧಿಯಲ್ಲಿ ಅದನ್ನು ಸಾಧಿಸಬೇಕೆಂಬ ಉದ್ದೇಶ ಹೊಂದಿದ್ದೇವೆ ಎಂದರು.
ಸಂಸ್ಥೆಯಲ್ಲಿ ರಾಜಕೀಯ ಬೇಡ:
ಮುಂದುವರಿದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಸಹಕಾರಿ ರಂಗಕ್ಕೆ ಬರುವವರು ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡವರು ಎನ್ನುವುದು ನಿಜ. ಆದರೆ ಸಂಘದ ಆಡಳಿತ ರಾಜಕೀಯ ರಹಿತವಾಗಿ ನಡೆಯಬೇಕು. ನಿರ್ದೇಶಕರ ಆಯ್ಕೆಯಲ್ಲಿ, ಸಿಬ್ಬಂದಿ ನೇಮಕದಲ್ಲಿ, ಸಂಘ ನೀಡುವ ಸೇವೆಯಲ್ಲಿ ನಾವು ಇದನ್ನು ಪಾಲಿಸಿಕೊಂಡು ಬಂದಿದ್ದೇವೆ. ಮುಂದೆಯೂ ಅದೇ ಧೋರಣೆ ಮುಂದುವರಿಯಲಿದೆ ಎಂದ ಪ್ರಕಾಶ್ಚಂದ್ರ ಶೆಟ್ಟಿ, ಈ ವರೆಗೆ ತಮಗೆ ನೆರವಿತ್ತ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಹಾಲಿ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.