ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜಗತ್ತು ಸ್ವರ್ಧಾತ್ಮಕ ಸಾಗುತ್ತಿದ್ದು, ಯುವಜನತೆ ಹೊಸ ಸಾಧ್ಯತೆಗಳಿಗೆ ತೆರೆದುಕೊಂಡು ಗಟ್ಟಿಯಾಗಿ ನಿಲ್ಲುವ, ಬದುಕಿನಲ್ಲಿ ಗೆಲ್ಲವ ವಿಶ್ವಾಸ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಬಸ್ರೂರು ಶಾರದಾ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಪಾಂಡುರಂಗ ಹೇಳಿದರು.
ಅವರು ನೆಹರು ಯುವ ಕೇಂದ್ರ ಉಡುಪಿ ಹಾಗೂ ಮೂಕಾಂಬಿಕಾ ಯುತ್ ಕ್ಲಬ್ ಬೈಂದೂರು ಆಶ್ರಯದಲ್ಲಿ ಬೈಂದೂರಿನ ಮೂಕಾಂಬಿಕಾ ಕಾಂಪ್ಲೆಕ್ಸ್ ಸಭಾಭವನದಲ್ಲಿ ಸೋಮವಾರ ಜರುಗಿದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಎಲ್ಲರಿಗೂ ಬದುಕಿನಲ್ಲಿ ಸಂತೋಷದ ದಿನಗಳನ್ನು ಕಾಣುವ ಕಾತುರ ಇರುತ್ತದೆ. ಆದರೆ ಕಷ್ಟಪಡಲು ಯಾರೂ ತಯಾರಿರುವುದಿಲ್ಲ. ಪರಿಶ್ರಮವಿಲ್ಲದೇ ಯಶಸ್ಸು ಪಡೆಯುವುದು ಅಸಾಧ್ಯ ಎಂದ ಅವರು. ಯುವಜನರಲ್ಲಿ ಮೊಬೈಲ್ ಅತಿಯಾದ ಬಳಕೆಯಿಂದಾಗಿ ಮಾನವ ಸಂಬಂಧಗಳು ದೂರವಾಗುತ್ತಿವೆ. ನಾನು ಎಂಬ ಅಹಂ ಭಾವವೂ ಆವರಿಸಿಕೊಳ್ಳುತ್ತಿದೆ. ಇದನ್ನು ಮೆಟ್ಟಿ ನಿಂತಾಗಲೇ ಯಶಸ್ಸು ಸಾಧಿಸಲು ಸಾಧ್ಯವಿದೆ ಎಂದರು.
ಮೂಕಾಂಬಿಕಾ ಯುತ್ ಕ್ಲಬ್ ಅಧ್ಯಕ್ಷ ಭಾಸ್ಕರ ಬಿಲ್ಲವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನೆಹರು ಯುವ ಕೇಂದ್ರದ ಸ್ವಯಂಸೇವಕ ಸುನಿಲ್ ಹೆಚ್. ಜಿ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ದೀಪಾ ಪ್ರಾರ್ಥಿಸಿದರು. ಶಿಕ್ಷಕಿಯರಾ ನಿರ್ಮಲಾ ಸ್ವಾಗತಿಸಿ, ರಶ್ಮಿತಾ ವಂದಿಸಿದರು. ಶಿಕ್ಷಕಿ ನವ್ಯಾ ಕಾರ್ಯಕ್ರಮ ನಿರೂಪಿಸಿದರು.