ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜಿಲ್ಲಾ ಪಂಚಾಯಿತಿ, ಹೇರೂರು ಗ್ರಾಮ ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಉಪ್ಪುಂದ ರೈತಸಿರಿ ಸ್ವಸಹಾಯ ಸಂಘಗಳ ಒಕ್ಕೂಟ, ಮೇಕೋಡು, ಕಿರಿಮಂಜೇಶ್ವರ, ಕೊಡೇರಿ, ಖಂಬದಕೋಣೆ, ಹೇರಂಜಾಲು ಹಾಲು ಉತ್ಪಾದಕರ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹೇರೂರಿನ ಮೇಕೋಡು ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಜಾನುವಾರು ಪ್ರದರ್ಶನ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ ‘ಕೇವಲ ಕೃಷಿ ಅವಲಂಬಿಸಿರುವ ರೈತರಿಗೆ ವರ್ಷವಿಡೀ ದುಡಿಮೆ ಇಲ್ಲ. ಅದಕ್ಕಾಗಿ ಹೈನುಗಾರಿಕೆಯನ್ನು ಮಾಡಬೇಕು’ ಎಂದು ಶಾಸಕ ಸಲಹೆ ನೀಡಿದರು.
‘ಹಾಲಿನ ಉತ್ಪಾದನಾ ವೆಚ್ಚ ಸರಿದೂಗಿಸುವ ಬೆಲೆ ಇಲ್ಲ. ಹೈನುಗಾರರಿಗೆ ಸರ್ಕಾರ ಪ್ರತಿ ಲೀಟರ್‌ಗೆ ?೫ ಪ್ರೋತ್ಸಾಹ ಧನ ನೀಡುತ್ತಿದೆ. ಆದರೂ, ಅವರಿಗೆ ನಿರೀಕ್ಷಿಸಿದ ಪ್ರತಿಫಲ ಸಿಗುತ್ತಿಲ್ಲ. ಆದುದರಿಂದ ಒಕ್ಕೂಟ ಸರಬರಾಜು ಮಾಡುವ ಪಶು ಆಹಾರದ ಬೆಲೆ ಕಡಿಮೆ ಮಾಡಬೇಕು. ಪಶುವೈದ್ಯರು ಅವರಿಗೆ ಉತ್ತಮ ಸೇವೆ ನೀಡಬೇಕು’ ಎಂದ ಅವರು ‘ಈ ಪ್ರದೇಶದಲ್ಲಿನ ಬೀಡಾಡಿ ದನಗಳಿಂದ ಬೆಳೆ ನಾಶವಾಗುತ್ತಿರುವುದನ್ನು ತಪ್ಪಿಸಲು ಕೊಲ್ಲೂರು ದೇವಸ್ಥಾನದ ವತಿಯಿಂದ ಗೋಶಾಲೆ ತೆರೆಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.
ಮೇಕೋಡು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹಾಗೂ ದ.ಕ.ಜಿಲ್ಲಾ ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಬಿಡಾಡಿ ದನಗಳ ಹಾವಳಿ ತಪ್ಪಿಸಲು ಸರ್ಕಾರವು ಈ ಪರಿಸರದಲ್ಲಿ ಗೋಶಾಲೆ ತೆರೆಯಲು ಮುಂದಾದರೆ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಹತ್ತು ಲಕ್ಷ ನೆರವು ನೀಡಲಿದೆ ಎಂದರು.
ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಪಶುಪಾಲನಾ ಇಲಾಖೆಯ ಕುಂದಾಪುರ ಸಹಾಯಕ ನಿರ್ದೇಶಕ ಸೂರ್ಯನಾರಾಯಣ ಉಪಾಧ್ಯಾಯ, ಕುಶಲಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ, ಹೇರೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶೇಖರ ಪೂಜಾರಿ, ಸದಸ್ಯ ಸತೀಶಕುಮಾರ ಶೆಟ್ಟಿ, ಖಂಬದಕೋಣೆ ಅಧ್ಯಕ್ಷ ಆನಂದ ಪೂಜಾರಿ, ಕೊಡೇರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಮೂಕಾಂಬು ಪೂಜಾರಿ, ಖಂಬದಕೋಣೆ ಸಂಘದ ಅಧ್ಯಕ್ಷೆ ಲಕ್ಷ್ಮೀ ಕುರುವಾಲ್, ಹೇರಂಜಾಲು ಸಂಘದ ಅಧ್ಯಕ್ಷೆ ರುಕ್ಮಿಣಿ ಹೆಬ್ಬಾರ್, ಒಕ್ಕೂಟದ ವಿಸ್ತರಣಾಧಿಕಾರಿ ರಾಜಾರಾಮ್ ಇದ್ದರು. ನಾಲ್ಕು ವಿಭಾಗಗಳ ಸ್ಪರ್ಧೆಯಲ್ಲಿ ೧೬೭ ಜಾನುವಾರುಗಳು ಬಂದಿದ್ದುವು. ಆರಂಭದಲ್ಲಿ ಗೌರಿ ದೇವಾಡಿಗ ಗೋಪೂಜೆ ನೆರವೇರಿಸಿದರು. ಡಾ. ನಾಗರಾಜ ಖಾರ್ವಿ ಬಹುಮಾನ ವಿಜೇತರ ಯಾದಿ ವಾಚಿಸಿದರು. ಅರುಣಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಬಹುಮಾನ ವಿಜೇತರು:
ಕರುಗಳು ವಿಭಾಗ- ೧. ರತ್ನಾ ಪೂಜಾರಿ ಉಪ್ರಳ್ಳಿ, ೨. ವೀರಣ್ಣ ಶೆಟ್ಟಿ ಹಳಗೇರಿ ೩. ಗೋಪಾಲ ನಾಯರಿ ಕಿರಿಮಂಜೇಶ್ವರ; ಸ್ಥಳೀಯ ಹಸುಗಳು-೧. ಚಣ್ಣಮ್ಮ ದೇವಾಡಿಗ ದಾಡಿಮನೆ ೨. ಮಂಜುನಾಥ ಗಾಣಿಗ ಹಳಗೇರಿ ೩. ರತ್ನಾ ಪೂಜಾರಿ ಯಡಕಂಟ; ಮಿಶ್ರತಳಿ (ಜರ್ಸಿ ಹಸುಗಳು)-೧. ನಿರ್ಮಲಾ ನಾಗೂರು ೨. ಪದ್ದು ಪೂಜಾರ್ತಿ ಹಳಗೇರಿ ೩. ವಿಶ್ವನಾಥ ಹವಾಲ್ದಾರ್ ಕಿರಿಮಂಜೇಶ್ವರ;ಮಿಶ್ರತಳಿ (ಎಚ್‌ಎಫ್)- ೧, ೨, ೩ ಹಾಗೂ ಚಾಂಪಿಯನ್ ಬ್ರೀಡ್ : ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮೇಕೋಡು. ಸಮಾಧಾನಕರ ಬಹುಮಾನ- ವಾಸು ಮತ್ತು ಭಾಸ್ಕರ.