ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಪರಿ ಸಂಸ್ಥೆಯ ಮುಖ್ಯಸ್ಥ ಮ್ಯಾಗ್ಸಸೆ ಪುರಸ್ಕೃತ ಪತ್ರಕರ್ತ ಪಿ. ಸಾಯಿನಾಥ ಇದೇ 14 ರಂದು ಸಂಜೆ 5.30ಕ್ಕೆ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾಮಂದಿರದಲ್ಲಿ ‘ಕಾರ್ಪೋರೇಟ್ ಫಾರ್ಮಿಂಗ್ ಮತ್ತು ಭಾರತದ ಕೃಷಿ ಬಿಕ್ಕಟ್ಟುಗಳು’ ಕುರಿತು ಉಪನ್ಯಾಸ ನೀಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಮುದಾಯ ಕುಂದಾಪುರದ ಕಾರ್ಯದರ್ಶಿ ಸದಾನಂದ ಬೈಂದೂರು, ‘ಕೃಷಿ ಬಿಕ್ಕಟ್ಟುಗಳು ಹೆಚ್ಚುತ್ತಾ ಹೋಗುತ್ತಿದ್ದು, ರೈತರು ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ. ‘ಕೃಷಿಕರ ಆದಾಯ ದುಪ್ಪಟ್ಟು ಮಾಡುವ ಉದ್ದೇಶ ಹೊಂದಿದ್ದೇವೆ’ ಎಂದು ಸರ್ಕಾರಗಳು ಹೇಳುತ್ತಿವೆ. ಜೊತೆಗೆ ಕಾರ್ಪೋರೇಟ್ ಫಾರ್ಮಿಂಗ್‌ಗೆ ಪ್ರೋತ್ಸಾಹ ನೀಡುವ ಕ್ರಮಗಳು ವೇಗ ಪಡೆದುಕೊಳ್ಳುತ್ತಿದೆ. ಇಂತಹದೊಂದು ಸನ್ನಿವೇಶದಲ್ಲಿ ರೈತನ ಪಾತ್ರ ಏನು? ಈ ವಿಚಾರಗಳಿಗೆ ರೈತ ಹೇಗೆ ಮುಖಾಮುಖಿ ಆಗಬಹುದು? ಎನ್ನುವ ಬಗ್ಗೆ ರೈತ ಸಮುದಾಯದ ಜೊತೆ ಸಂವಾದ ನಡೆಸುವುದು ಈ ಉಪನ್ಯಾಸದ ಉದ್ದೇಶ’ ಎಂದರು.
‘ಕುಂದಾಪುರಕ್ಕೆ ಮೊದಲ ಬಾರಿ ಬರುತ್ತಿರುವ ಪಿ.ಸಾಯಿನಾಥ ಅವರು, ಮಹಾರಾಷ್ಟ್ರದ ಮರಾಠವಾಡಾ, ವಿದರ್ಭ ಪ್ರಾಂತ್ಯಗಳಲ್ಲಿ ರೈತ ಸಮುದಾಯದ ಸಂಕಷ್ಟಗಳ ಅಧ್ಯಯನ ನಡೆಸು
ತ್ತಿದ್ದು, ಅವರ ಪರಿ (ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ) ಸಂಸ್ಥೆಯ ಮೂಲಕ ನಾಶವಾಗುತ್ತಿರುವ ಭಾರತದ ಗ್ರಾಮೀಣ ಬದುಕು–ಸಂಸ್ಕೃತಿಗಳನ್ನು ದಾಖಲಿಸುವ ಮಹತ್ವದ ಕೆಲಸದಲ್ಲಿ ನಿರತರಾಗಿದ್ದಾರೆ’ ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಾಯೋಜಕ ಸಂಸ್ಥೆ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಟ್ರಸ್ಟಿ ರಾಜಾರಾಂ ತಲ್ಲೂರು ಮಾತನಾಡಿ, ‘ಕರಾವಳಿಯಲ್ಲಿ ರೈತರು, ಮೀನುಗಾರರು, ಪಶು ಸಂಗೋಪನೆ ಮಾಡುವವರು ಹಾಗೂ ಸಹಕಾರಿ ರಂಗಗಳಲ್ಲಿ ಸಕ್ರಿಯರಾಗಿರುವವರಿಗೆ ಈ ಉಪನ್ಯಾಸ ಉತ್ತಮ ದೃಷ್ಟಿಕೋನ ನೀಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪತ್ರಕರ್ತ ರಾಮಕೃಷ್ಣ ಹೇರ್ಳೆ ಇದ್ದರು.