ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಆಧುನಿಕ ಜೀವನ ಶೈಲಿ, ಒತ್ತಡದ ಬದುಕು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಯುವ ಜನತೆ ಒತ್ತಡದ ಬದುಕಿನಿಂದ ಮುಕ್ತಿ ಪಡೆಯಲು ಪರಿಹಾರ ಮಾರ್ಗಗಳನ್ನು ಸೂಕ್ತ ಸಮಯದಲ್ಲಿ ಕಂಡುಕೊಳ್ಳಬೇಕು ಎಂದು ನಿಮಾನ್ಸ್ ಆಸ್ಪತ್ರೆ ಬೆಂಗಳೂರು ಇದರ ಕ್ಷೇತ್ರ ಸಂಪರ್ಕಾಧಿಕಾರಿ ದಿವಾಕರ್ ಹೇಳಿದರು.
ಇವರು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ, ನಿಮಾನ್ಸ್ ಆಸ್ಪತ್ರೆ ಬೆಂಗಳೂರು, ಜನ-ಆರೋಗ್ಯ ಕೇಂದ್ರ, ಯುವ ಸ್ಪಂದನ ಕೇಂದ್ರ ಉಡುಪಿ, ಜೇಸಿಐ ಕುಂದಾಪುರ ಸಿಟಿ ಆಯೋಜಿಸಿದ ಬಿಕ್ಕಟ್ಟು ನಿರ್ವಹಣೆ ಮತ್ತು ಆರೋಗ್ಯ ಜೀವನ ಶೈಲಿ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಆರೋಗ್ಯ ಜೀವನ ಶೈಲಿಯ ಮಾಹಿತಿದಾರರಾದ ಗುರುರಾಜ ಕೊತ್ವಾಲ್‌ರವರು ಹೃದಯ ಸಂಬಂಧಿ ಕಾಯಿಲೆಗಳಿಗೆ ಪ್ರಾಥಮಿಕ ಚಿಕಿತ್ಸೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಜೇಸಿಯ ಕುಂದಾಪುರ ಸಿಟಿಯ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಯುವ ಸ್ಪಂದನ ಕೇಂದ್ರ ಉಡುಪಿಯ ಯುವ ಪರಿವರ್ತಕ ನರಸಿಂಹ ಗಾಣಿಗ ಹಾಗೂ ಪಾರ್ಥಸಾರಥಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರವೀಣ್ ಮೊಗವೀರ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸುಶಾಂತ್ ಸ್ವಾಗತಿಸಿ, ಚರಣ್ ವಂದಿಸಿದರು.