ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ಯಾವುದೇ ಕಾರ್ಯ ಸಫಲವಾಗಬೇಕಾದರೆ, ಕಾರ್ಯದಲ್ಲಿ ಯಶಸ್ಸು ಸಿಗಬೇಕಾದರೆ ಆತ್ಮವಿಶ್ವಾಸ, ಶ್ರದ್ಧೆ, ಛಲ ಮುಖ್ಯ. ಸಮಾಜಮುಖಿ ಕಾರ್ಯಗಳನ್ನು ಮಾಡುವಾಗ ಟೀಕೆ ಟಿಪ್ಪಣಿಗಳು ಕೇಳಿ ಬರುವುದು ಸಹಜ. ಆದರೆ ಇದರಿಂದ ಕುಗ್ಗದೆ ತಮ್ಮ ಕಾರ್ಯದಿಂದ ವಿಮುಖರಾಗದೆ ನಿರಂತರವಾಗಿ ಸಮಾಜ ಸೇವೆಯನ್ನು ಮಾಡಬೇಕು. ಇದರಿಂದ ಅದೆಷ್ಟೋ ಜನರಿಗೆ ಉಪಯೋಗವಾಗುತ್ತದೆ. ಈ ನಿಟ್ಟಿನಲ್ಲಿ ಗಂಗೊಳ್ಳಿಯ ಶ್ರೀ ಗುರುಜ್ಯೋತಿ ಸ್ಪೋಟ್ಸ್ ಕ್ಲಬ್ ಕಳೆದ ಮೂರು ದಶಕಗಳಿಂದ ಸಮಾಜಮುಖಿ, ಜನರಿಗೆ ಉಪಯೋಗವಾಗುವ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಪ್ರಾಧ್ಯಾಪಕಿ ಡಾ.ರೇಖಾ ವಿ.ಬನ್ನಾಡಿ ಹೇಳಿದರು.
ಗಂಗೊಳ್ಳಿ ಗಂಗೊಳ್ಳಿಯ ಕೆಎಫ್‌ಡಿಸಿ ವಠಾರದಲ್ಲಿ ಜರಗಿದ ಗಂಗೊಳ್ಳಿಯ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್‌ನ 36ನೇ ವಾರ್ಷಿಕೋತ್ಸವ ಮತ್ತು ಗುರುಜ್ಯೋತಿ ಶಿಕ್ಷಣ ನಿಧಿ ಯೋಜನೆಯ 19ನೇ ವರ್ಷದ ವಿದ್ಯಾರ್ಥಿವೇತನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಂಗೊಳ್ಳಿ ಸ.ವಿ.ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಉಮೇಶ ಕರ್ಣಿಕ್, ಪ್ರಗತಿ ಮಹಿಳಾ ವಿವಿಧೋದ್ದೇಶ ಸಂಘದ ಪ್ರಧಾನ ವ್ಯವಸ್ಥಾಪಕ ರಾಘವೇಂದ್ರ ಕುಲಾಲ್ ಶುಭಾಶಂಸನೆಗೈದರು. ಏಷ್ಯನ್ ಪವರ್ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ವಿಜೇತ ಸತೀಶ ಖಾರ್ವಿ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರಸನ್ನಾ ಪೈ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಅಶಕ್ತರಿಗೆ ಸಹಾಯಧನ ವಿತರಿಸಲಾಯಿತು.
ಮತ್ಸೋದ್ಯಮಿ ಚೌಕಿ ಸಂತೋಷ ಖಾರ್ವಿ ಧ್ವಜಾರೋಹಣ ನೆರವೇರಿಸಿದರು. ಕುಂದಾಪುರದ ಶ್ರೀ ಮಹಾಂಕಾಳಿ ದೇವಸ್ಥಾನದ ಅಧ್ಯಕ್ಷಪ್ರಕಾಶ ಆರ್.ಖಾರ್ವಿ, ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ವಾಸುದೇವ ಶಿಪಾ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ರಾಘವೇಂದ್ರ ಖಾರ್ವಿ ಸ್ವಾಗತಿಸಿದರು. ಕಾರ್ಯದರ್ಶಿ ವಿಕ್ರಮ ಖಾರ್ವಿ ವರದಿ ವಾಚಿಸಿದರು. ಕ್ರೀಡಾ ಕಾರ್ಯದರ್ಶಿ ಶ್ರೀಕಾಂತ ಬಿಲ್ಲವ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸ್ವಾತಿ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಸುಂದರ ಜಿ. ಕಾರ್ಯಕ್ರಮ ನಿರ್ವಹಿಸಿದರು.