ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಡಿ, ಕುಂದಾಪುರ ಇವರ ಸಂಯೋಜನೆಯ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣ ಹಾಗೂ ಸಂಪೂರ್ಣ ಸಾಕ್ಷರತಾ ಅಭಿಯಾನ – 2020. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಿಂದ 10 ತಂಡದ ಭೋಧಕ/ಭೋಧಕೇತರ ಸಿಬ್ಬಂದಿಗಳನ್ನೊಳಗೊಂಡು ಊರ ಗಣ್ಯರ ಸಮಕ್ಷಮದಲ್ಲಿ, ಶ್ರೀ. ಕ್ಷೇತ್ರ ಚಕ್ರೇಶ್ವರಿ ಕೋಡಿ ಇಲ್ಲಿ ವಿದ್ಯುಕ್ತವಾಗಿ ಚಾಲನೆಗೊಂಡಿತು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು, ಕೋಡಿ ಕುಂದಾಪುರ ಇವರ ಆಡಳಿತ ನಿರ್ದೇಶಕರಾದ ದೋಮ ಚಂದ್ರಶೇಖರ್ ಇವರು ಮಾದಕ ವ್ಯಸನದಿಂದ ಮುಕ್ತ ಕೋಡಿ ನಿರ್ಮಾಣ ಆಗುವುದರೊಂದಿಗೆ ಬ್ಯಾರೀಸ್‌ನ ಶಿಕ್ಷಣದ ಫಲ ಸರ್ವರಿಗೂ ತಲುಪುವುದರ ಮೂಲಕ ಯಶಸ್ಸನ್ನು ಕಾಣಬೇಕಾದದ್ದು ಈ ಅಭಿಯಾನದ ಗುರಿ ಎಂದು ಪ್ರಾಸ್ತಾವಿಕವಾಗಿ ನುಡಿದರು.
ಕುಂದಾಪುರ ಪುರಸಭಾ ಸದಸ್ಯೆ ಲಕ್ಷ್ಮೀಭಾಯಿ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣ ಹಾಗೂ ಜನಜಾಗೃತಿ ಆಂದೋಲನದ ಸ್ಟಿಕ್ಕರ್ ಬಿಡುಗಡೆಗೊಳಿಸಿ ಅಭಿಯಾನಕ್ಕೆ ಶುಭ ಹಾರೈಸಿದರು. ಶ್ರೀ.ಕ್ಷೇತ್ರ ಚಕ್ರೇಶ್ವರಿಯ ಟ್ರಸ್ಟೀ ಸಂಜೀವ ಪೂಜಾರಿ ಇವರು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರ ಮನವಿ ಪತ್ರ ಬಿಡುಗಡೆಗೊಳಿಸಿದರು. ಅಭಿಯಾನದ ಕರಪತ್ರವನ್ನು ಕೋಡಿಯ ಹಿರಿಯ ನಾಗರಿಕರಾದ ಹುಸೈನರ್ ಬಿಡುಗಡೆಗೊಳಿಸಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ದಿ. ಹಾಜಿ ಮಾಸ್ಟರ್ ಮೆಹಮುದ್ ಹಾಗೂ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ದುಡಿದು ಅಗಲಿದ ದಿ. ಮಾಧವ ಪೂಜಾರಿ ಇವರ ಆತ್ಮಕ್ಕೆ ಮೌನ ಪ್ರಾರ್ಥನೆಯೊಂದಿಗೆ ಗೌರವ ಸಲ್ಲಿಸಲಾಯಿತು.
ಅಭಿಯಾನದ ವೇದಿಕೆಯಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಲಹೆಗಾರರಾದ ಹಾಜಿ. ಅಬುಷೇಕ್, ಶಂಕರ ಪೂಜಾರಿ, ತಿಮ್ಮಪ್ಪ ಖಾರ್ವಿ, ನಾಗರಾಜ ಕಾಂಚನ್, ಪ್ರಕಾಶ್, ಪುರಸಭಾ ಮಾಜಿ ಸದಸ್ಯರಾದ ಪ್ರಭಾಕರ ಸೇರ್ವೆಗಾರ್, ಮುಂತಾದವರು ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಅಬ್ದುಲ್ ರೆಹಮಾನ್ ರವರು ವಹಿಸಿಕೊಂಡಿದ್ದರು. ಬ್ಯಾರೀಸ್ ಕನ್ನಡ ಅನುದಾನಿತ ಪ್ರೌಢಶಾಲಾ ಸಹಶಿಕ್ಷಕರಾದ ಜಯಶೀಲ ಶೆಟ್ಟಿ ರವರು ವಂದಿಸಿ, ಬ್ಯಾರೀಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಸಂದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.