ಕುಂದಾಪುರ: ಕೋಣಿ ಪರಿಸರದ ಯುವಕನೋರ್ವ ಕುಂದಾಪುರ -ಬಸ್ರೂರು ರಾಜ್ಯ ಹೆದ್ದಾರಿಯ ಸಟ್ವಾಡಿ ಕ್ರಾಸ್ ಬಳಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಾಗ ತಕ್ಷಣ ಸ್ಥಳಕ್ಕೆ ಬಂದಿದ್ದ ಇನ್ನೋರ್ವ ಯುವಕ ಪ್ರಾಣದ ಹಂಗು ತೊರೆದು ಹೊಳೆಗೆ ಹಾರಿ ರಕ್ಷಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಸಂತೋಷ್(25) ಎಂದು ಗುರುತಿಸಲಾಗಿದೆ. ರಸ್ತೆಯಲ್ಲಿರುವ ಸಣ್ಣ ಸೇತುವೆಯ ಮೇಲಿನಿಂದ ನದಿಗೆ ಹಾರಿದ ಯುವಕನ್ನು ನೋಡಿದ ಮಡಗಾಂವ್ ಮೂಲದ ಯುವಕ ಸಚಿನ್ ಕೇರ್ಕಾರ್(19) ನದಿಗೆ ಹಾರಿದನು. ಇವರ ಹಿಂದಿನಿಂದ ಬಂದಿದ್ದ ಜಪ್ತಿಯ ಬಾಬಣ್ಣ ಕುಲಾಲ್ ಅವರೂ ಹೊಳೆಗೆ ಹಾರಿ ಯುವಕನ ರಕ್ಷಣೆಗೆ ಮುಂದಾಗಿದ್ದಾರೆ. ಎಲ್ಲವೂ ಕ್ಷಣಾರ್ಧದೊಳಗೆ ನಡೆದಿದ್ದರಿಂದ ಆತ್ಮಹತ್ಯೆಗೆ ಯತ್ನಿಸಿದ ಸಂತೋಷ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ್ದ ಸಂತೋಷ್ ಶಿಲೆಕಲ್ಲು ಗಲ್ಲು ಕೆಲಸ ಮಾಡಿಕೊಂಡಿದ್ದು, ಆತ್ಮಹತ್ಯಗೆ ಕಾರಣ ತಿಳಿದು ಬಂದಿಲ್ಲ.