ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿದ್ಯುತ್ ಶಕ್ತಿ ತಿದ್ದುಪಡಿ ಕಾಯ್ದೆ-2020 ಮಸೂದೆ ವಿರೋಧಿಸಿ ದೇಶವ್ಯಾಪಿ ವಿದ್ಯುತ್ ನೌಕರರು, ಅಧಿಕಾರಿಗಳು ನಡೆಸುತ್ತಿರುವ ಪ್ರತಿಭಟನೆಯ ಭಾಗವಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ, ಅಸೋಸಿಯೇಷನ್‌ಗಳ ಒಕ್ಕೂಟ ಮತ್ತು ಕ.ವಿ.ಪ್ರ.ನಿ ನೌಕರರ ಸಂಘ ರಿ. ಪ್ರಾಥಮಿಕ ಸಮಿತಿ ಬೈಂದೂರು ಇದರ ನೇತೃತದಲ್ಲಿ ಸೋಮವಾರ ಬೈಂದೂರು ಮೆಸ್ಕಾಂ ಉಪವಿಭಾಗ ಕಛೇರಿಯ ಆವರಣದಲ್ಲಿ ನೌಕರರು ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಕ.ವಿ.ಪ್ರ.ನಿ ನೌಕರರ ಸಂಘ ರಿ. ಪ್ರಾಥಮಿಕ ಸಮಿತಿ ಬೈಂದೂರು ಇದರ ಅಧ್ಯಕ್ಷ ರಾಧಾಕೃಷ್ಣ ಬಿಜೂರು ಮಾತನಾಡಿ ವಿದ್ಯುತ್ ಶಕ್ತಿ ತಿದ್ದುಪಡಿ ಕಾಯ್ದೆ-2020 ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಉದ್ದೇಶ ಹೊಂದಿದೆ. ರಾಜ್ಯದಲ್ಲಿ ಇದು ಜಾರಿಗೆ ಬಂದರೆ ಕೃಷಿ ಪಂಪ್‌ಸೆಟ್‌ಗಳು, ಕುಟೀರ ಜ್ಯೋತಿ ಹಾಗೂ ಭಾಗ್ಯಜೋತಿ ಯೋಜನೆ ಹೊಂದಿರುವ ಬಡ ಕುಟುಂಬಗಳು ಹಾಗೂ ಸಣ್ಣ ಕೈಗಾರಿಕೆಗಳಿಗೆ ತೊಂದರೆಯಾಗಲಿದೆ. ಇಲಾಖೆಯ ನೌಕರರಿಗೂ ವೃತ್ತಿ ಅಭದ್ರತೆ ಎದುರಾಗಲಿದೆ. ಹಾಗಾಗಿ ಈ ಕಾಯಿದೆಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಬಾರದು ಮತ್ತು ಜಾರಿಗೆ ತರದಂತೆ ಕೇಂದ್ರ ಸರಕಾರಕ್ಕೆ ಶಿಪಾರಸ್ಸು ಮಾಡಬೇಕು ಎಂದು ಅವರು ಆಗ್ರಹಿಸಿದರು.
ಮೆಸ್ಕಾಂ ನಾವುಂದ ಶಾಖೆಯ ಶಾಖಾಧಿಕಾರಿ ವಿಜೇಂದ್ರ ಆಚಾರ್ಯ ಮಾತನಾಡಿದರು. ಕೊಲ್ಲೂರು ಶಾಖಾಧಿಕಾರಿ ಕೃಷ್ಣ ಕಲ್ಲೇರಾ, ಬೈಂದೂರು ಸಹಾಯಕ ಇಂಜಿನಿಯರ್ ಶಶಿರಾಜ್ ಶೆಟ್ಟಿಯಾನ್, ಶಿರೂರು ಶಾಖಾಧಿಕಾರಿ ಸುಜಿತ್‌ಕುಮಾರ್, ಬೈಂದೂರು ಸಹಾಯಕ ಲೆಕ್ಕಾಧಿಕಾರಿ ಎಂ. ವೈ. ಭಾಸ್ಕರ್, ಕೃಷ್ಣ ಮೊಗವೀರ, ವಸಂತ ಎಂ. ನಾಯಕ್, ಸುಧಾಕರ, ಗುದ್ದೇಶ್ ಹೆಗ್ಡೆ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. ಬೈಂದೂರು ಉಪವಿಭಾಗದ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು./ಕುಂದಾಪ್ರ ಡಾಟ್ ಕಾಂ ಸುದ್ದಿ/