ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿಯಲ್ಲಿ ನಡೆದ ದೋಣಿ ಅವಘಡದಲ್ಲಿ ಒಟ್ಟು ನಾಲ್ವರು ವ್ಯಕ್ತಿಗಳು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ದುರ್ಘಟನೆಯಲ್ಲಿ ಉಪ್ಪುಂದದ ನಿವಾಸಿಗಳಾದ ಬಿ. ನಾಗ(46), ಲಕ್ಷಣ(34), ಶೇಖರ ಜಿ(35), ಮಂಜುನಾಥ ಖಾರ್ವಿ(38) ನಾಪತ್ತೆಯಾಗಿದ್ದಾರೆ.
ಕೊಡೇರಿಯ ಸಾಗರಶ್ರೀ ಎಂಬ ಹೆಸರಿನ ಜೋಡಿ ದೋಣಿ ಮೀನುಗಾರಿಕೆ ಮುಗಿಸಿ ಇಂದು ಮಧ್ಯಾಹ್ನ ಹಿಂದಿರುಗುತ್ತಿದ್ದ ಸಂದರ್ಭ ವಿಪರೀತ ಗಾಳಿ, ಸಮುದ್ರದ ಅಲೆಗಳ ರಭಸಕ್ಕೆ ಬಂದರು ಪ್ರವೇಶಿಸುವ ಬದುವಿನ ಕಲ್ಲಿನ ತಡೆಗೋಡೆಗೆ ಬಡಿದು ಮಗುಚಿ ಬಿದ್ದಿದೆ. ದೋಣಿಯಲ್ಲಿ 12 ಮಂದಿ ಮೀನುಗಾರರಿದ್ದರು. ಈ ಪೈಕಿ ನಾಲ್ವರು ನಾಪತ್ತೆಯಾಗಿದ್ದು, ಶೋಧಕಾರ್ಯ ನಡೆಸಲಾಗುತ್ತಿದೆ. ದೋಣಿಯನ್ನು ಮೇಲೆ ಎಳೆಯಲಾಗುತ್ತಿದೆ. ಬದುಕುಳಿದಿರುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ. ಉಳಿದ ಅಸ್ಪಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶಾಸಕರು, ಡಿಸಿ ಭೇಟಿ:
ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಎಸ್ಪಿ ವಿಷ್ಣುವರ್ದನ, ಎಸ್ಪಿ ಹರಿರಾಂ ಶಂಕರ್, ಎಸಿ ರಾಜು, ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸೇರಿದಂತೆ ವಿವಿಧ ಮುಖಂಡರು ಭೇಟಿ ನೀಡಿ ಘಟನೆ ಮಾಹಿತಿ ಪಡೆದುಕೊಂಡಿದ್ದಾರೆ. ಬೈಂದೂರು ವೃತ್ತ ನಿರೀಕ್ಷಕ ಸುರೇಶ್ ನಾಯಕ್, ಗಂಗೊಳ್ಳಿ ಕರಾವಳಿ ಕಾವಲು ಪಡೆ ಹಾಗೂ ರಕ್ಷಣಾ ಸಿಬ್ಬಂದಿಗಳು, ಸ್ಥಳೀಯರು ಹಾಗೂ ಮೀನುಗಾರ ಸಹಕಾರದಿಂದ ರಕ್ಷಣಾ ಕಾರ್ಯಚರಣೆ ನಡೆಸಿದ್ದಾರೆ.