ಕುಂದಾಪುರ: ಆ ಊರಿನ ದೇವಸ್ಥಾನಕ್ಕೆ ಬರುವ ಸಹಸ್ರ ಸಂಖ್ಯೆಯ ಭಕ್ತಾದಿಗಳ ಗೋಳು ಹೇಳತೀರದು. ದೇವರ ದರ್ಶನ ಪಡೆಯಲು ತುಂಬಿ ಹರಿಯುವ ಕುಬ್ಜ ನದಿಯಲ್ಲಿ ಮರದ ಕಾಲುಸಂಕ ದಾಟಿ ನಡೆಯುವುದಲ್ಲದೇ, ದುರಸ್ತಿಯಾಗದ ಕಚ್ಚಾ ರಸ್ತೆಯಲ್ಲಿ ಕೆಸರು ಎರೆಚಿಕೊಂಡು ಸಾಗಬೇಕಾದ ಅನಿವಾರ್ಯತೆ ಇಲ್ಲಿಗೆ ಆಗಮಿಸುವ ಭಕ್ತರದ್ದು.
ಕುಂದಾಪುರ ತಾಲೂಕಿನ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಆಜ್ರಿ ಚೋನಮನೆ ಶ್ರೀ ಶನೀಶ್ವರ ದೇವಸ್ಥಾನ ಹಾಗೂ ಕಮಲಶಿಲೆಗೆ ಹತ್ತಿರದಿಂದ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗವು ಸಂಪೂರ್ಣ ಹದಗೆಟ್ಟಿದ್ದು ವ್ಯವಸ್ಥೆಯಲ್ಲಿನ ಲೋಪಕ್ಕೆ ಹಿಡಿದ ಕೈಗನ್ನಡಿಯಂತಿದೆ.
ಶನೀಶ್ವರ ದೇವಸ್ಥಾನಕ್ಕೆ ಹೋಗಲು ಆಜ್ರಿ ಬಸ್ಸು ನಿಲ್ದಾಣದಿಂದ 2-3 ಕೀ.ಮೀ ವಾಹನ ಇಲ್ಲವೇ ನಡೆದುಕೊಂಡು ಸಾಗಬೇಕು. ವಾಹನದ ಮೂಲಕ ಕಿ.ಮೀ ದೂರ ಸಾಗಿ ಬಂದರೂ ಮುಂದೆ ಸುಮಾರು 200 ಮೀ ದೂರ ತೆರಳಲು ಕೆಸರು ತುಂಬಿದ ದಾರಿಯಲ್ಲಿ ಹರಸಾಹಸ ಪಡಲೇಬೇಕು. ಅಲ್ಲಿಂದ ದೇವಸ್ಥಾನಕ್ಕೆ ತಲುಪಲು ಕಬ್ಜಾ ನದಿಯನ್ನು 100 ಮೀ ಉದ್ದದ ಅಪಾಯಕಾರಿ ಮರದ ಸೇತುವೆಯ ಮೂಲಕವೇ ದಾಟಿ ನಡೆಯಬೇಕು. ದೇವಸ್ಥಾನ ಮಾತ್ರವಲ್ಲದೇ ಈ ಆಸುಪಾಸಿನ ಮನೆ ಹಾಗೂ ಕಮಲಶಿಲೆಯಿಂದ ಆಜ್ರಿ ಮೂಲಕ ಸಿದ್ಧಾಪುರ ಬರುವವರು ಇದೇ ಮಾರ್ಗವನ್ನು ನೆಚ್ಚಿಕೊಂಡಿದ್ದಾರೆ. ಈ ಭಾಗದ ರಸ್ತೆಯೂ ಅಲ್ಲಲ್ಲಿ ಹದಗೆಟ್ಟು ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದ್ದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದೇವಸ್ಥಾನಕ್ಕೆ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿರುವುದರಿಂದ ದೇವಳಕ್ಕೆ ಅಗತ್ಯವಾದ ಸೇತುವೆಯನ್ನು ಆಡಳಿತ ಮಂಡಳಿಯೇ ನಿರ್ಮಿಸಬೇಕು ಎಂದು ಊರಿನ ಕೆಲವರು ಬೇಡಿಕೆ ಇಟ್ಟಿದ್ದರು ಆದರೆ ಗ್ರಾಮ ಸರಕಾರವೇ ಇದರ ಹೊಣೆ ಹೊತ್ತುಕೊಳ್ಳಲಿ ಎಂದು ದೇವಸ್ಥಾನದ ಆಡಳಿತ ಮಂಡಳಿ ಹಿಂದೆ ಸರಿದಿತ್ತು. ಒಟ್ಟಿನಲ್ಲಿ ಯಾರಾದರೂ ಸುಸಜ್ಜಿತವಾದ ಸೇತುವೆ ನಿರ್ಮಿಸಲಿ ಎಂದು ಆಜ್ರಿಯ ಜನತೆ ಆಗ್ರಹಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ- editor@kundapra.com















