ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನೆಂಪು – ವಂಡ್ಸೆಯ ಶ್ರೀ ಸಾಯಿ ಕಲ್ಚರಲ್ ಸ್ಪೋಟ್ಸ್ ಕ್ಲಬ್‌ನಲ್ಲಿ ಈಗಾಗಲೇ ಎರಡು ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಕೋರ್ಟು, ಸ್ನೂಕರ್ ಕೋರ್ಟು, ಎರಡು ಕೇರಂ ಕೋರ್ಟುಗಳು ಇದ್ದು ದಿನ ಸುಮಾರು 40 – 50 ಜನ ಸ್ಥಳೀಯ ಯುವಕರು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳುತ್ತಿದ್ದು, ನ.1ರಂದು ಟೇಬಲ್ ಟೆನಿಸ್ ಒಳಾಂಗಣ ಕೋರ್ಟನ್ನು ಆರಂಭ ಮಾಡುತ್ತಿದ್ದು, ರಾಷ್ಟ್ರೀಯ ಟೇಬಲ್ ಟೆನಿಸ್ ಕ್ರೀಡಾಪಟು ಪಲ್ಲವಿ ವಿ. ರಾವ್ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಶ್ರೀ ಸಾಯಿ ಕಲ್ಚರಲ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷರಾದ ಅಶೋಕ ಶೆಟ್ಟಿ ಜಾಡ್ಕಟ್ಟು ತಿಳಿಸಿದರು.
ಅ.29ರಂದು ಶ್ರೀ ಸಾಯಿ ಕಲ್ಚರಲ್ ಸ್ಪೋಟ್ರ್ಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಸಂಸ್ಥೆಯು ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಹಂಗಳೂರು ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಈಗಾಗಲೇ ಯಕ್ಷಗಾನ ತರಬೇತಿ ಶಿಬಿರವನ್ನು ನಡೆಸುತ್ತಿದ್ದೇವೆ. ಪ್ರಸಿದ್ಧ ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ ತರಬೇತಿ ನೀಡುತ್ತಿದ್ದಾರೆ. ನ.1ರಂದು ಈ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ. ಆ ದಿನ ಮಧ್ಯಾಹ್ನ 2 ಗಂಟೆಗೆ ಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಕೃಷ್ಣಾರ್ಜುನ’ ಎನ್ನುವ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.
ಮುಂದಿನ ದಿನಗಳಲ್ಲಿ ಈ ಸಂಸ್ಥೆಯ ವತಿಯಿಂದ ಹೊರಾಂಗಣ ಲಾನ್ ಟೆನಿಸ್ ಕೋರ್ಟ್, ವಾಲಿಬಾಲ್ ಕೋರ್ಟ್ ರಚಿಸುವುದರ ಮೂಲಕ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ತರಬೇತಿ ನೀಡಲಾಗುವುದು. ಜೊತೆಗೆ ಯೋಗ ತರಗತಿ, ಭರತನಾಟ್ಯ ತರಗತಿಗಳನ್ನು ನಡೆಸಲಾಗುವುದು. ಸ್ಥಳೀಯ ಶಿಕ್ಷಣ ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಧನವನ್ನು ನೀಡಿ ಪ್ರೋತ್ಸಾಹಿಸುವ ಯೋಜನೆ ರೂಪಿಸಲಾಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಹಕ್ಲಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಸುಭಾಸ್ ಶೆಟ್ಟಿ ಹೊಳ್ಮಗೆ, ವಂಡ್ಸೆ ಗ್ರಾ.ಪಂ.ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ವಂಡ್ಸೆ, ಆಲೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಆಲೂರು, ಜೇಸಿಐ ಚಿತ್ತೂರು ಮಾರಣಕಟ್ಟೆ ಇದರ ಗೋವರ್ದನ್ ಜೋಗಿ, ನಾಗೇಶ ನಾಯಕ್, ರಮೇಶ ಶೆಟ್ಟಿ, ರಮಾನಂದ ಆಚಾರ್ಯ, ಯಕ್ಷಗಾನ ಗುರು ಅಶ್ವಿನಿ ಕೊಂಡದಕುಳಿ, ತಾಳಮದ್ದಲೆ ಅರ್ಥದಾರಿ ಸುನಿಲ್ ಹೊಲಾಡು, ಸಂತೋಷ ಅಂಕದಕಟ್ಟೆ, ಶಿಕ್ಷಕ ವಸಂತರಾಜ ಶೆಟ್ಟಿ ಉಪಸ್ಥಿತರಿದ್ದರು.