ಬೈಂದೂರಿನಲ್ಲಿ ಕರ್ನಾಟಕ ಅರೆಭಾಷೆ ಅಕಾಡೆಮಿಯ ‘ಸಾಹೇಬ್ರು ಬಂದವೇ’ ನಾಟಕ ಪ್ರದರ್ಶನ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕುಂದಾಪ್ರ ಕನ್ನಡ ಭಾಷೆ ತನ್ನ ಮೂಲ ಸೊಗಡು ಕಳೆದುಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದ್ದು, ಅದರ ಪುನಶ್ಚೇತನಕ್ಕೆ ಅಕಾಡೆಮಿ ರಚಿಸಲು ನಿಯೋಗದೊಂದಿಗೆ ತೆರಳಿ ಮುಖ್ಯಮಂತ್ರಿಗಳೊಂದಿಗೆ ಪ್ರಸ್ತಾಪಿಸಲಾಗುವುದು ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.
ಅವರು ಸೋಮವಾರ ಬೈಂದೂರಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು, ಜೆಸಿಐ ಬೈಂದೂರು ಸಿಟಿ ಹಾಗೂ ಸಂಚಲನ ರಿ. ಹೊಸೂರು ಆಶ್ರಯದಲ್ಲಿ ಕರ್ನಾಟಕ ಅರೆಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ರಂಗ ಪ್ರಸ್ತುತಿ ‘ಸಾಹೇಬ್ರು ಬಂದವೇ’ ನಾಟಕ ಪ್ರದರ್ಶನದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಂದಾಪ್ರ ಕನ್ನಡ ಭಾಷಿಕರಲ್ಲಿ ಕರಾವಳಿಯ ಕ್ರೀಯಾಶೀಲತೆ ಹಾಗೂ ಘಟ್ಟದ ಗಡಸುತನ ಮೇಳೈಸಿದ್ದು, ಉಳಿದೆಲ್ಲಾ ಪ್ರದೇಶಗಳಿಗಿಂತ ಭಿನ್ನವಾಗಿದೆ. ಕುಂದಾಪುರದ ಜನರ ನೇರವಾಗಿ ಮಾತನಾಡಿದರೂ, ಅಪಾರ ಪ್ರೀತಿ ವಿಶ್ವಾಸವನ್ನು ಹೊಂದಿದವರಾಗಿದ್ದಾರೆ ಎಂದು ಇಲ್ಲಿನ ಜನಸಂಸ್ಕೃತಿಯನ್ನು ಶಾಸಕರು ಬಣ್ಣಿಸಿದರು.
ಸುಳ್ಯದ ಅರೆಭಾಷೆಗೂ ಕುಂದಾಪುರದ ಕುಂದಾಪುರ ಕನ್ನಡಕ್ಕೂ ಸಾಮ್ಯತೆ ಇದೆ. ನಾಟಕದ ಮೂಲಕ ಅರೆಭಾಷೆಯನ್ನು ಎಲ್ಲೆಡೆಯೂ ಪಸರಿಸುವ ಕೆಲಸ ಅಕಾಡೆಮಿ ಮಾಡುತ್ತಿರುವುದು ಶ್ಲಾಘನಾರ್ಹ ಎಂದರು.
ಸಾಹೇಬ್ರು ಬಂದವೇ ನಾಟಕದ ನಿರ್ದೇಶಕ ನಿರ್ದೇಶಕ ಜೀವನರಾಂ ಸುಳ್ಯ ಸುರಭಿ ಲಾಂಚನ ಬಿಡುಗಡೆಗೊಳಿಸಿ ಬಳಿಕ ಮಾತನಾಡಿ ಕುಂದಾಪ್ರ ಕನ್ನಡವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಕೇಳಿ ಆನಂದಿಸುವ ವರ್ಗ ಕುಂದಾಪುರ ಮಾತ್ರವಲ್ಲದೇ ಹಲವೆಡೆ ಇದೆ. ಅದರಂತೆಯೇ ಅರೆಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿ ಕ್ರೀಯಾಶೀಲವಾಗಿದ್ದು, ಮೊದಲ ಹಂತದಲ್ಲಿ ನಾಟಕ ಪ್ರದರ್ಶನದ ಮೂಲಕ ಜನಸಾಮಾನ್ಯರನ್ನು ತಲುಪಲು ಯೋಜಿಸಿದೆ ಎಂದರು.
ಕರ್ನಾಟಕ ಅರೆಭಾಷೆ ಅಕಾಡೆಮಿಯ ಸದಸ್ಯ ಎ. ಟಿ. ಕುಸುಮಾಕರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಜೆಸಿಐ ಬೈಂದೂರು ಸಿಟಿಯ ಸ್ಥಾಪಕಾಧ್ಯಕ್ಷ ಮಣಿಕಂಠ ದೇವಾಡಿಗ, ಸಂಚಲನ ಹೊಸೂರಿನ ಅಧ್ಯಕ್ಷ ಮಹದೇವ ಮರಾಠಿ, ಸುರಭಿ ಕಾರ್ಯದರ್ಶಿ ಭಾಸ್ಕರ ಬಾಡ ಉಪಸ್ಥಿತರಿದ್ದರು.
ಸುರಭಿ ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಸ್ವಾಗತಿಸಿ, ಸಂಚಲನದ ರಾಜು ಮರಾಠಿ ವಂದಿಸಿದರು. ಸುರಭಿ ನಿರ್ದೇಶಕ ಸುಧಾಕರ ಪಿ. ಕಾರ್ಯಕ್ರಮ ನಿರೂಪಿಸಿದರು. ನೇಹಿಗ ಜೀವನರಾಂ ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ಬಳಿಕ ‘ಸಾಹೇಬ್ರು ಬಂದವೇ’ ನಾಟಕ ಪ್ರದರ್ಶನಗೊಂಡಿತು.
ಇದನ್ನೂ ಓದಿ
► ಕುಂದಾಪುರ, ಬೈಂದೂರಿನಲ್ಲಿ ಅರೆಭಾಷೆ ’ನಾಟಕ ಸಾಹೇಬ್ರು ಬಂದವೇ’ ಪ್ರದರ್ಶನ – https://kundapraa.com/?p=43891 .