ಬೆಳಿಗ್ಗಿನಿಂದ ಜಡಿ ಮಳೆ ಸುರಿಯುತ್ತಿತ್ತು. ಮಳೆ ಸುರಿದು ಗದ್ದೆಯಲ್ಲಿ ನೀರು ತುಂಬಿದಂತೆಲ್ಲ ನೆರೆದಿದ್ದವರ ಉತ್ಸಾಹವೂ ಹೆಚ್ಚಿತ್ತಲಿತ್ತು. ಅಲ್ಲಿ ನಾಯಕನಿರಲಿಲ್ಲ, ಕಾರ್ಯಕರ್ತರೂ ಇರಲಿಲ್ಲ. ಒಂದು ದಿನ ಎಲ್ಲರಲ್ಲೂ ಎಲ್ಲವನ್ನೂ ಮರೆತು, ಕಲೆತು ಸ್ನೇಹವನ್ನು ಗಟ್ಟಿಗೊಳಿಸುವ ತುಡಿತ ಮಾತ್ರ ಕಾಣುತ್ತಿತ್ತು.
ಕುಂದಾಪುರ ತಾಲೂಕಿನ ಸಟ್ವಾಡಿ ಬಸ್ ನಿಲ್ದಾಣದ ಬಳಿಯ ಕೆಸರು ಗದ್ದೆಯಲ್ಲಿ ಕುಂದಾಪುರ ಬಿಜೆಪಿ ಯುವಮೋರ್ಚಾದ ವತಿಯಿಂದ ಆಯೋಜಿಸಲಾಗಿದ್ದ ’ಶ್ರಾವಣದ ಕೆಸರಿನಲ್ಲಿ ಕಮಲ ಕೂಟ’ ಎಂಬ ವಿಭಿನ್ನ ಕಾರ್ಯಕ್ರಮ ಕೆಸರಿನಲ್ಲಿ ಸ್ನೇಹ ಕಲೆಯುವಂತೆ ಮಾಡಿತ್ತು. ರಾಜಕೀಯ ಪಕ್ಷದ ಕಾರ್ಯಕ್ರಮವೆಂದಾಗಲೆಲ್ಲಾ ನಾಯಕರು, ಭಾಷಣ, ಸಂಘಟನಾತ್ಮಕ ಚಟುವಟಿಕೆಗಳೇ ಕಣ್ಮುಂದೆ ಬರುವಾಗ ಕಮಲ ಕೂಟವು ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿತ್ತು. ಸದಾ ಪಕ್ಷ, ರಾಜಕಾರಣದಲ್ಲಿ ತೊಡಗಿಕೊಳ್ಳುವವರಿಗೆ ಒಂದಿಷ್ಟು ವಿಶ್ರಾಂತಿ ನೀಡುವ ಸಲುವಾಗಿಯೇ ಆಯೋಜಿಸಲಾಗಿದ್ದ ಕೆಸರು ಗದ್ದೆಯ ಆಟೋಟ ಸ್ವರ್ಧೆಯಲ್ಲಿ ಉಡುಪಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಬಿಜೆಪಿ ಪಕ್ಷದ ಸಾವಿರಾರು ಕಾರ್ಯಕರ್ತರು ಉತ್ಸಾಹದಿಂದಲೇ ಭಾಗವಹಿಸಿದ್ದರು. (ಕುಂದಾಪ್ರ ಡಾಟ್ ಕಾಂ ವರದಿ)
ಆಟೋಟ:
ಕೆಸರು ಗದ್ದೆಯಲ್ಲಿ ಆಯೋಜಿಸಲಾಗಿದ್ದ ಮಾನವ ಪಿರಮಿಡ್, ಹಗ್ಗಜಗ್ಗಾಟ, ಉಪ್ಪುಮೂಟೆ ಓಟ, ಕೆಸರಿನ ಓಟ, ನಿಂಬೆ ಚಮಚ ಓಟ, ಡೋಂಕಾಲ್ ಓಟ, ಕಬ್ಬಡಿ, ವಾಲಿಬಾಲ್, ತ್ರೋಬಾಲ್, ಕರಗಳಲ್ಲಿ ಕಮಲ ಸ್ವರ್ಧೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಮಹಿಳೆಯರೂ ಎಲ್ಲಾ ವಿಭಾಗದಲ್ಲಿಯೂ ಭಾಗವಹಿಸಿ ತಾವೂ ಯಾರಿಗೂ ಕಮ್ಮಿ ಇಲ್ಲವೆಂದು ತೋರಿಸಿಕೊಟ್ಟರು. (ಕುಂದಾಪ್ರ ಡಾಟ್ ಕಾಂ ವರದಿ)
ಸವಿಯಾದ ಉಪಹಾರ-ಊಟ:
ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ವಿಶೇಷವಾದ ಊಟ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಊಪಹಾರಕ್ಕೆ ಕೊಟ್ಟೆ ಕಡುಬು ಹಾಗೂ ಕೊತ್ತೂಂಬರಿ ಸೊಪ್ಪಿನ ಚಟ್ನಿ ಮಾಡಿದ್ದರೇ, ಊಟದಲ್ಲಿ ಗಂಜಿ, ತುಪ್ಪ, ಉಪ್ಪಿನಕಾಯಿ, ಮೆಣಸು, ಚಟ್ನಿ, ಶಾಖಾಹಾರಿಗಳಿಗೆ ಚಟ್ಲೆಚಟ್ನಿಯ ವ್ಯವಸ್ಥೆಯಾಗಿತ್ತು. ಚಟ್ಟಂಬಡೆ, ಗೆಣಸಿನ ಹಪ್ಪಳ, ಹಲಸಿನ ಹಪ್ಪಳ, ಟೀ, ಕಾಫಿಯನ್ನು ಬೆಳಿಗ್ಗೆಯಿಂದ ಸಂಜೆಯ ತನಕ ಸರಬರಾಜು ಮಾಡಲಾಗುತ್ತಿತ್ತು. (ಕುಂದಾಪ್ರ ಡಾಟ್ ಕಾಂ ವರದಿ)
ಸ್ನೇಹದ ಪಾಠ:
ಕಮಲಕೂಟದಲ್ಲಿ ಸ್ನೇಹಕ್ಕಾಗಿ ಆಟ ಎಂಬ ಮಾತೊಂದು ಆಗಾಗ ಕೇಳಿ ಬರುತ್ತಲೇ ಇತ್ತು. ಉದ್ಘಾಟನಾ ಸಮಾರಂಭದಲ್ಲಿ ಪಕ್ಷಕ್ಕೆ ಹೊಸ ಕಾರ್ಯಕರ್ತರು ಸೇರ್ಪಡೆಗೊಂಡರು. (ಕುಂದಾಪ್ರ ಡಾಟ್ ಕಾಂ ವರದಿ) ಅಲ್ಲಿ ಸೇರಿದ್ದ ಸಾವಿರಾರು ಕಾರ್ಯಕರ್ತರಲ್ಲಿ ಒಂದಿಷ್ಟು ಮಂದಿ ಪರಸ್ಪರ ಕೆಸರೆರೆಚಿಕೊಂಡು ಕುಣಿದಾಡಿದರೇ, ಮತ್ತೊಂದಿಷ್ಟು ಮಂದಿ ಕ್ರೀಡೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಇವೆಲ್ಲವನ್ನೂ ನೋಡುತ್ತಾ, ಸ್ನೇಹಿತರೊಂದಿಗೆ ಹರಟುತ್ತಾ ಒಂದಿಷ್ಟು ಮಂದಿ ನಿಂತಿದ್ದರು. ಊರಿನ ಮಕ್ಕಳು ಮಹಿಳೆಯರೂ ಮಳೆಯ ನಡುವೆಯೂ ಸಡಗರದಿಂದಲೇ ಭಾಗವಹಿಸಿದ್ದರು. (ಕುಂದಾಪ್ರ ಡಾಟ್ ಕಾಂ ವರದಿ)
ಒಟ್ಟಿನಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸಿ ಎಲ್ಲರಿಂದಲೂ ಮೆಚ್ಚುಗೆ ಪಡೆಯುವಂತಾಯಿತು.
ಉದ್ಘಾಟನಾ ಸಮಾರಂಭ:
ಕಾರ್ಯಕ್ರಮವನ್ನು ಉದ್ಘಾಟಿಸಿದ ಬೈಂದೂರು ಮಾಜಿ ಶಾಸಕ ಲಕ್ಷ್ಮೀ ನಾರಾಯಣ ಮಾತನಾಡಿ ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಕ್ರೀಡಾಕೂಟಗಳು ಇನ್ನಷ್ಟು ನಡೆದಾಗ ಸಂಸ್ಕೃತಿಯ ಉಳಿವು ಸಾಧ್ಯ. ಬಿಜೆಪಿ ಯುವಮೋರ್ಚಾ ನಿರಂತರವಾಗಿ ಇಂತಹ ಕ್ರೀಡಾಕೂಟವನ್ನು ಆಯೋಜಿಸುತ್ತಿರಲಿ ಎಂದರು.
ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಪೂಜಾರಿ, ಉಡುಪಿ ಮಾಜಿ ಶಾಸಕ ರಘುಪತಿ ಭಟ್, ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ವಸಂತ್ ಶೆಟ್ಟಿ ಬೆಳ್ವೆ ಕಾರ್ಯಕ್ರಮವಕ್ಕೆ ಶುಭಕೋರಿದರು.
ಕಂದಾವರ ಗ್ರಾ.ಪಂ. ಅಧ್ಯಕ್ಷೆ ಸವಿತಾ ಪೂಜಾರಿ, ಕೋಣಿ ಗ್ರಾ.ಪಂ.ಅಧ್ಯಕ್ಷ ಸಂಜೀವ ಪೂಜಾರಿ, ಯಡ್ತಾಡಿ ಗ್ರಾ.ಪಂ ಅಧ್ಯಕ್ಷ ಸತೀಶ್ ಶೆಟ್ಟಿ, ಕೋಟೇಶ್ವರ ಗ್ರಾ.ಪಂ ಅಧ್ಯಕ್ಷೆ ಜಾನಕಿ ಬಿಲ್ಲವ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಮಹೇಶ್, ಬಸ್ರೂರು ಗ್ರಾ.ಪಂ. ಅಧ್ಯಕ್ಷ ಕುಮಾರ್, ಪಕ್ಷದ ಮುಖಂಡರುಗಳಾದ ಶರಶ್ಚಂದ್ರ ಹೆಗ್ಡೆ, ರವಿಂದ್ರ ದೊಡ್ಮನೆ, ಮೇರ್ಡಿ ದಿನಕರ ಶೆಟ್ಟಿ, ಗೌತಮ್ ಹೆಗ್ಡೆ, ಪ್ರದೀಪ್ ಶೆಟ್ಟಿ, ಗೋಪಾಲ ಕಳಂಜಿ, ಮೊದಲಾದವರು ಉಪಸ್ಥಿತರಿದ್ದರು
ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ್ ಕಾವೇರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮೀನುಗಾರಿಕಾ ಪ್ರಕೋಷ್ಠದ ರಾಜ್ಯ ಸಂಚಾಲಕ ಕಿಶೋರ್ ಕುಮಾರ್ ಕಮಲ ಕೂಟದ ಬಗೆಗೆ ಮಾಹಿತಿ ನೀಡಿದರು. ಯುವಮೋರ್ಚಾ ಅಧ್ಯಕ್ಷ ಶಂಕರ ಅಂಕದಕಟ್ಟೆ ಸ್ವಾಗತಿಸಿ, ಮಾಲಿನಿ ಸತೀಶ್ ಕಾರ್ಯಕ್ರಮ ನಿರೂಪಿಸಿದರು.