ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಮಕ್ಷತ್ರಿಯ ಸಮಾಜವನ್ನು ಸಾಮಾಜಿಕವಾಗಿ ಸಂಘಟಿಸುವ ಸಲುವಾಗಿ ಇಪ್ಪತ್ತಾರು ವರ್ಷಗಳ ಹಿಂದೆ ಅಖಿಲ ಕರ್ನಾಟಕ ರಾಮಕ್ಷತ್ರಿಯ ಸಂಘ ಸ್ಥಾಪಿಸಿದ್ದು, ಬಳಿಕ ಅದು ವಿಶ್ವ ರಾಮಕ್ಷತ್ರಿಯ ಮಹಾ ಸಂಘವಾಗಿ ಕಾರ್ಯನಿರ್ವಹಿಸುತ್ತಿದ್ದು ಸಮಾಜದ ಸಂಘಟನೆ ಹಾಗೂ ಉನ್ನತಿಗಾಗಿ ಶ್ರಮಿಸಲಾಗುತ್ತಿದೆ ಎಂದು ವಿಶ್ವ ರಾಮಕ್ಷತ್ರಿಯ ಮಹಾ ಸಂಘದ ಅಧ್ಯಕ್ಷ ಎಚ್. ಆರ್. ಶಶಿಧರ್ ನಾಯಕ್ ಹೇಳಿದರು.
ಅವರು ಕುಂದಾಪುರ ಪಾರಿಜಾತ ಸಭಾಭವನದಲ್ಲಿ ನಡೆದ ವಿಶ್ವ ರಾಮಕ್ಷತ್ರಿಯ ಮಹಾ ಸಂಘದ ನೂತನ ಪಧಾದಿಕಾರಿಗಳ ಸಭೆ ಹಾಗೂ ಪಧಾದಿಕಾರಿಗಳ ವಿಳಾಸ ಕೈಪಿಡಿ ಬಿಡುಗಡೆಗೋಳಿಸಿ ಮಾತನಾಡಿದರು.
ಸುಮಾರು 500 ವರ್ಷಗಳ ಹಿಂದೆ ಉತ್ತರದ ಮದ್ಯ ಪ್ರದೇಶ, ಗೋವಾದಲ್ಲಿ ನೆಲೆಸಿದ್ದ ವಿಶ್ವ ರಾಮಕ್ಷತ್ರಿಯರು ಪೋರ್ಚುಗೀಸರ ಆಳ್ವಿಕೆಯ ನಂತರ ದಕ್ಷಿಣಕ್ಕೆ ಬಂದು ಉತ್ತರ ಕನ್ನಡ, ಉಡುಪಿ, ದ.ಕ ಜಿಲ್ಲೆ ಹಾಗೆಯೇ ಕೇರಳದ ಬೇಕಲ್ ವರೆಗೆ ವಾಸ್ತವ್ಯ ಹೂಡಿದ್ದಾರೆ. ರಾಜ್ಯದ ಮಲೆನಾಡು, ಬಯಲುಸೀಮೆ, ಬೆಂಗಳೂರು, ಮೈಸೂರಿನಲ್ಲೂ ಭಾಗಗಳಲ್ಲಿಯೂ ಉದ್ಯೋಗಕ್ಕಾಗಿ ವಾಸವಾಗಿದ್ದಾರೆ.ಇತ್ತೀಚಿನ ದಿನಗಳಲ್ಲಿ ರಾಮಕ್ಷತ್ರಿಯ ಸಮಾಜ ಬಹಳ ಶ್ರಮವಹಿಸಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಪ್ರಗತಿ ಕಾಣುತ್ತಿದೆ. ಸಂಘಟನೆಯ ಮೂಲಕ ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯಗಳನ್ನು ಮಾಡಲು ಬದ್ಧರಾಗಿದ್ದೇವೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಪಿಎಸ್ ಮಾತನಾಡಿ ಸಂಘದ ಮೂಲಕ ಉಪಸಮಿತಿಗಳನ್ನು ರಚಿಸಲಾಗಿದ್ದು, ಇದರ ಮೂಲಕ ರಾಮಕ್ಷತ್ರಿಯ ಸಮಾಜದಲ್ಲಿ ತಳ ಮಟ್ಟದಲ್ಲಿರುವವರಿಗೆ ನೆರವು, ಶಿಕ್ಷಣ ಹಾಗೂ ಸೂರನ್ನು ಒದಗಿಸಬೇಕೆಂಬ ನೆಲೆಯಲ್ಲಿ ವಿವಿಧ ಯೋಜನೆ ಹಮ್ಮಿಕೊಳ್ಳಲಾಗಿದೆ. ವಿಶ್ವದಲ್ಲಿರುವ ಎಲ್ಲಾ ರಾಮಕ್ಷತ್ರಿಯ ಸಂಘಟನೆಗಳಿಗೆ ಮಾದರಿಯಾಗಿ, ಹೊಸ ಹುರುಪಿನಿಂದ ಹೊಸ ಸಂಘಟನೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
ರಾಮಕ್ಷತ್ರಿಯ ಮಹಾಸಂಘದ ಕಾರ್ಯಧ್ಯಕ್ಷ ಕೊತ್ವಾಲ್ ಶೇಷಯ್ಯ ಶೇರುಗಾರ್, ಕೋಶಾಧಿಕಾರಿ ಬಿಜೂರು ರಾಮಕೃಷ್ಣ ಶೇರುಗಾರ್, ಉಪಾಧ್ಯಕ್ಷರುಗಳಾದ ನಾಗರಾಜ್ ಕಾಮಧೇನು, ಶಿವರಾಮ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು.