ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸರಕಾರಿ ಕಛೇರಿಯಲ್ಲಿ ಜನಸಾಮಾನ್ಯರ ಕೆಲಸವಾಗದಿದ್ದರೆ ಅಧಿಕಾರಿಗಳು ಆ ಹುದ್ದೆಯಲ್ಲಿದ್ದೇನು ಪ್ರಯೋಜನ. ಕೆಲಸ ಮಾಡಲಾಗದಿದ್ದರೆ ವರ್ಗಾವಣೆ ತೆಗೆದುಕೊಂಡು ಹೋಗಿ. ಹೀಗೆ ಜನರಿಗೆ ತೊಂದರೆ ಕೊಟ್ಟರೆ ನಾನು ಸುಮ್ಮನಿರುವುದಿಲ್ಲ ಎಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಿದ್ಧಾಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲವು ಬಡ ಕುಟುಂಬಗಳಿಗೆ 94ಸಿ ಹಕ್ಕುಪತ್ರ ನೀಡಿ ಆರ್‌ಟಿಸಿ ಮಾಡಿಕೊಳ್ಳುವ ಸಂದರ್ಭ ಆ ಜಾಗ ಡೀಮ್ಡ್ ಫಾರೆಸ್ಟ್‌ಗೆ ಸೇರಿದ್ದೆಂಬ ನೆಪ ಹೇಳುತ್ತಿರುವ ಬಗ್ಗೆ ಕುಂದಾಪುರ ತಹಶಿಲ್ದಾರರ ವಿರುದ್ಧ ಗರಂ ಆದರು. ಬೈಂದೂರು ವಿಧಾನಸಭಾ ಕ್ಷೇತ್ರದ ಹಲವೆಡೆ ಇದೇ ಪರಿಸ್ಥಿತಿ ಇದೆ. ಜನಸಾಮಾನ್ಯನೊಬ್ಬ ಮನೆ ಕಟ್ಟಿಕೊಳ್ಳಲು ಪಡೆದ ನಿವೇಶನಕ್ಕೂ ಅಧಿಕಾರಿಗಳು ನಿಲ್ಲದ ನೆಪ ಹೇಳಿ ಮತ್ತೆ ಕಿತ್ತುಕೊಳ್ಳುವುದು ಸರಿಯಲ್ಲ. ಈ ವ್ಯವಸ್ಥೆ ಸರಿಪಡಿಸಿದ್ದರೆ ತಾನು ಖುದ್ದಾಗಿ ತಾಲೂಕು ಕಛೇರಿಯಲ್ಲಿ ಪ್ರತಿಭಟನೆ ಕೂರುತ್ತೇನೆ ಎಂದರು.
ಬೈಂದೂರು ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿಯನ್ನು ಜಿಲ್ಲೆಯ ಕೋವಿಡ್ ಕೆಲಸಕ್ಕೆ ನಿಯೋಜಿಸಿರುವುದರಿಂದ ಆಸ್ಪತ್ರೆಯಲ್ಲಿ ತೊಂದರೆಯಾಗುತ್ತಿರುವುದು, ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಸ್ಪಚ್ಛತೆ ಇಲ್ಲದಿರುವುದು, ನೀರಿನ ಸಮಸ್ಯೆ ಪರಿಹಾರಕ್ಕಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ಇಂದಿರಾ ಶೆಟ್ಟಿ, ಬೈಂದೂರು ತಾಲೂಕು ಪಂಚಾಯತ್ ಅಧ್ಯಕ್ಷ ಮಹೇಂದ್ರ ಪೂಜಾರಿ, ಉಪಾಧ್ಯಕ್ಷ ಮಾಲಿನಿ ಕೆ., ಶೋಭಾ ಜಿ. ಪುತ್ರನ್, ಕುಂದಾಪುರ ತಾಪಂ ಇಓ ಕೇಶವ ಶೆಟ್ಟಿಗಾರ್, ಬೈಂದೂರು ತಾಪಂ ಇಓ ಭಾರತಿ, ಜಿಪಂ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತಿದ್ದರು.