ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘ ಗಂಗೊಳ್ಳಿ ಇವರ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗ, ಗಂಗೊಳ್ಳಿ ಉಪ ಅಂಚೆ ಕಛೇರಿ ಇವರ ಸಹಯೋಗದೊಂದಿಗೆ ಆಧಾರ್ ಕುರಿತಾದ ವಿವಿಧ ಸೇವಾ ಶಿಬಿರ ಗಂಗೊಳ್ಳಿಯ ಶ್ರೀ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ನಡೆಯಿತು.
ಶಿಬಿರದಲ್ಲಿ ಮಾಹಿತಿ ನೀಡಿ ಮಾತನಾಡಿದ ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕ ನವೀನಚಂದರ್, ಕೇಂದ್ರ ಸರಕಾರದ ಅನೇಕ ಯೋಜನೆಗಳು ಅಂಚೆ ಇಲಾಖೆ ಮೂಲಕ ಅನುಷ್ಠಾನಗೊಳ್ಳುತ್ತಿದ್ದು ಇದರ ಪ್ರಯೋಜನ ಎಲ್ಲರೂ ಪಡೆದುಕೊಳ್ಳಬೇಕಿದೆ. ಸರಕಾರದ ಎಲ್ಲಾ ಯೋಜನೆಯ ಪ್ರಯೋಜನ ಪಡೆಯಲು ಆಧಾರ ಕಡ್ಡಾಯ ಮಾಡಿರುವುದರಿಂದ ಎಲ್ಲರೂ ಆಧಾರ್ ನೊಂದಣಿ ಮಾಡಿಸಿಕೊಳ್ಳಬೇಕು. ಆಧಾರ್ ಕಾರ್ಡ್‌ನಲ್ಲಿ ವಿಳಾಸ, ಹೆಸರು ಬದಲಾವಣೆ, ಬಯೋಮೆಟ್ರಿಕ್ ಪರಿಷ್ಕರಣೆ, ಮೊಬೈಲ್ ನಂಬರ್ ತಿದ್ದುಪಡಿ ಇದ್ದಲ್ಲಿ ಮಾಡಿಸಿಕೊಳ್ಳಬೇಕು. ಗಂಗೊಳ್ಳಿಯ ಉಪ ಅಂಚೆ ಕಛೇರಿಯಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಲು ಹಾಗೂ ವಾರದ ಎಲ್ಲಾ ದಿನಗಳಲ್ಲಿ ಆಧಾರ್ ತಿದ್ದುಪಡಿ ಸೇವೆ ನೀಡಲು ಕ್ರಮಕೈಗೊಳ್ಳಲಾಗವುದು ಎಂದರು.
ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಶಿಬಿರ ಉದ್ಘಾಟಿಸಿದರು. ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಗ್ರಾಪಂ ಸದಸ್ಯ ಬಿ.ರಾಘವೇಂದ್ರ ಪೈ, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ, ಅಂಚೆ ಇಲಾಖೆ ಕುಂದಾಪುರ ಉತ್ತರ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಗಣಪತಿ ಮರ್ಡಿ ಶುಭಾಶಂಸನೆಗೈದರು. ಗಂಗೊಳ್ಳಿ ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ಅಧ್ಯಕ್ಷ ರಾಮಪ್ಪ ಖಾರ್ವಿ, ಸಂಘದ ವ್ಯವಸ್ಥಾಪಕ ಮೋಹನ ಖಾರ್ವಿ, ಸಂಘದ ನಿರ್ದೇಶಕರು ಉಪಸ್ಥಿತರಿದ್ದರು. ಸದಾಶಿವ ಖಾರ್ವಿ ಸ್ವಾಗತಿಸಿದರು. ಸಂಘದ ಸಿಬ್ಬಂದಿ ಕೇಶವ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು.











