ಕುಂದಾಪುರ: ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ ಕುಂದಾಪುರ ತಾಲೂಕು ಸಮಿತಿ ಸೆಪ್ಟೆಂಬರ್ 2 ರಂದು ಉಡುಪಿ ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಿಗೆ ಬಂದ್ ಕರೆ ನೀಡಿದೆ.
ಖಾಸಗಿ ಹಾಗೂ ವಿದೇಶಿ ವಿವಿ ಗಳನ್ನು ಕೈಬಿಡಬೇಕು, ಸರಕಾರಿ ಕಾಲೇಜುಗಳನ್ನು ಬಲಪಡಿಸಬೇಕು, ಕೇಂದ್ರ ಬಜೇಟ್ ನ ಶೇ 10 ರಷ್ಟು, ಜಿಡಿಪಿಯಲ್ಲಿ ಶೇ 6 ರಷ್ಟು, ರಾಜ್ಯ ಬಜೇಟ್ ನ ಶೇ 30 ರಷ್ಟು ಹಣವನ್ನು ಶಿಕ್ಷಣಕ್ಕೆ ಮೀಸಲಿಡಲು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಶನ್ ಹಾವಳಿಯನ್ನು ನಿಯಂತ್ರಿಸಲು ಜಿಲ್ಲಾ ಶಿಕ್ಷಣ ರೆಗ್ಯೂಲೇಟಿಂಗ್ ಪ್ರಾಧಿಕಾರ ರಚಿಸಬೇಕು, ಕುಂದಾಪುರದಿಂದ ಭಟ್ಕಳಕ್ಕೆ ಕಾಲೇಜು ಬಿಡುವ ಸಮಯದಲ್ಲಿ ಹೆಚ್ಚುವರಿ ಸರಕಾರಿ ಬಸ್ಸ್ ಬಿಡಬೇಕು. ಕರಾವಳಿ ಭಾಗದ ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನಿಟ್ಟುಕೊಂಡು ಜಿಲ್ಲೆಯ ಸಮಗ್ರ ಶೈಕ್ಷಣಿಕ ಅಭಿವೃದ್ದಿಗೆ ಒತ್ತಾಯಿಸಿ ಕರೆ ನೀಡಿರುವ ಶಾಲಾ-ಕಾಲೇಜು ಬಂದ್ ವಿದ್ಯಾರ್ಥಿಗಳು ಬೆಂಬಲಿಸಬೇಕೆಂದು ಎಸ್.ಎಫ್.ಐ ನ ರಾಜ್ಯ ಸಮಿತಿ ಸದಸ್ಯರು ಹಾಗೂ ತಾಲೂಕು ಕಾರ್ಯದರ್ಶಿ ಶ್ರೀಕಾಂತ್ ಹೆಮ್ಮಾಡಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.