ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆ ಮೀನುಗಾರಿಕಾ ಹೊರಬಂದರಿನ ಸಮೀಪದ 500 ಮೀಟರು ಉದ್ದದ ತೀರದಲ್ಲಿ ಋತುಭೇದವಿಲ್ಲದೆ ಕಡಲ್ಕೊರೆತ ಸಂಭವಿಸುತ್ತಿದೆ. ಈಗ ಬಂದ ಚಂಡಮಾರುತದಿಂದ ಸಮುದ್ರ ಉಕ್ಕೇರಿ ಇಲ್ಲಿನ ಜೀವನಾಡಿಯಾಗಿರುವ ಕರಾವಳಿ ಮಾರ್ಗದ ಸುಮಾರು 25 ಮೀಟರು ಭಾಗ ಸಂಪೂರ್ಣ ಕುಸಿದು, ಸಂಪರ್ಕ ಕಡಿತವಾಗಿದೆ. ಈ ಪ್ರದೇಶದಲ್ಲಿ, ಮಾರಸ್ವಾಮಿಯಲ್ಲಿ ಹೆದ್ದಾರಿ ರಕ್ಷಣೆಗೆ ಕೈಗೊಂಡ ’ಸುಸ್ಥಿರ ಕಡಲತೀರ ಸಂರಕ್ಷಣಾ ಯೋಜನೆ’ ಮಾದರಿಯನ್ನು ಅನುಷ್ಠಾನಿಸಲು ಪ್ರಯತ್ನಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಡಲ್ಕೊರೆತ ಮತ್ತು ಚಂಡಮಾರುತದಿಂದ ತೀವ್ರ ಹಾನಿಗೊಂಡ ಮರವಂತೆ ಮೀನುಗಾರರ ವಸತಿ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿದ್ದಾಗ ಅವರು ಈ ಆಶ್ವಾಸನೆ ನೀಡಿದರು. ಸುಸ್ಥಿರ ಯೋಜನೆ ಕಾರ್ಯಗತವಾಗುವ ವರೆಗೆ, ಈ ಪ್ರದೇಶದಲ್ಲಿ ಇನ್ನಷ್ಟು ಹಾನಿಯಾಗುವುದನ್ನು ತಡೆಯಲು ತಾತ್ಕಾಲಿಕ ತಡೆಗೋಡೆ ನಿರ್ಮಿಸಲು ಅಗತ್ಯ ಕ್ರಮಕ್ಕೆ ಮುಖ್ಯ ಮಂತ್ರಿಗಳನ್ನು ವಿನಂತಿಸಲಾಗುವುದು. ಸಮುದ್ರ ಕಬಳಿಸಿರುವ ಜಮೀನು ಹಾಗೂ ಮರಗಳಿಗೆ ಪರಿಹಾರ ದೊರಕಿಸಲಾಗುವುದು ಎಂದು ಅವರು ಹೇಳಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ ಅವರ ಜತೆಗಿದ್ದರು. ಮರವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷ ಲೋಕೇಶ ಖಾರ್ವಿ, ಮಾಜಿ ಅಧ್ಯಕ್ಷೆ ಅನಿತಾ ಆರ್. ಕೆ, ಮೀನುಗಾರ ಮುಖಂಡರಾದ ಮೋಹನ ಖಾರ್ವಿ, ಸೋಮಯ್ಯ ಖಾರ್ವಿ, ಚಂದ್ರ ಖಾರ್ವಿ ಸಚಿವರಿಗೆ ಇಲ್ಲಿ ಸಂಭವಿಸಿದ ಹಾನಿಯ ವಿವರ ನೀಡಿದರು.
ದೊಂಬೆಗೆ ಶಾಸಕ ಸುಕುಮಾರ ಶೆಟ್ಟಿ ಭೇಟಿ:
ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ದೊಂಬೆ ಭಾಗದಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದ್ದು, ಭಾನುವಾರ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಹಾನಿ ಪ್ರಮಾಣವನ್ನು ಪರಿಶೀಲಿಸಿದರು.
ಈ ಸಂದರ್ಭ ಅವರು ಮಾತನಾಡಿ ಕಡಲ್ಕೋರೆತ ತಡೆಗೆ ಶಾಶ್ವತ ತಡೆಗೋಡೆಗಾಗಿ 2.35 ಕೋಟಿ ರೂ. ಅಂದಾಜುಪಟ್ಟಿ ಸಿದ್ಧಗೊಳಿಸಿ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅಲ್ಲಿನ ತನಕ ತಾತ್ಕಾಲಿಕವಾಗಿ ತಡಗೋಡೆ ನಿರ್ಮಿಸಲಾಗುವುದು ಎಂದರು.
ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್., ಮುಖ್ಯಾಧಿಕಾರಿ ನವೀನ್, ಬಂದರು ಮತ್ತು ಬಳನಾಡು ಜಲಸಾರಿಗೆ ಇಲಾಖಾ ನಿರ್ದೇಶಕರು, ದೀಪಕ್‌ಕುಮಾರ್ ಶೆಟ್ಟಿ ಸೇರಿದಂತೆ ಇತರರು ಇದ್ದರು.
► ತೌಕ್ತೆ ಚಂಡಮಾರುತದಿಂದ ವಿವಿಧೆಡೆ ಹಾನಿ: ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ – https://kundapraa.com/?p=48270 .