ಕುಂದಾಪ್ರ ಡಾಟ್ ಕಾಂ ವರದಿ.
ಕೊಲ್ಲೂರು: ಪ್ರಸಿದ್ಧ ಕೊಡಚಾದ್ರಿ ಬೆಟ್ಟಕ್ಕೆ ಚಾರಣ ಕೈಗೊಳ್ಳುವವರಿಗೆ ಪ್ರವೇಶ ಶುಲ್ಕವೇ ದುಬಾರಿಯಾಗಿರುವುದು ಚಾರಣಪ್ರಿಯರ ನಿದ್ದೆಗೆಡಿಸಿದೆ. ಚಾರಣದ ದರ ದುಪ್ಪಟ್ಟು ಜೊತೆಗೆ ಕ್ಯಾಮರಾ ಕೊಂಡೊಯ್ಯುವವರಿಗೂ ಹೆಚ್ಚಿನ ದರ ನಿಗದಿಪಡಿಸಲಾಗಿದೆ.
ಪಶ್ಚಿಮಘಟ್ಟ ಪರಿಸರ ಸೂಕ್ಷ್ಮ ಪ್ರದೇಶವಾದ ಕೊಡಚಾದ್ರಿಯು ಕುದುರೆಮುಖ ವನ್ಯಜೀವಿ ಅರಣ್ಯ ವಿಭಾಗದ ಕೊಲ್ಲೂರು ವನ್ಯಜೀವಿ ಇಲಾಖಾ ವ್ಯಾಪ್ತಿಯಲ್ಲಿದ್ದು ಎಪ್ರಿಲ್ 1ರಿಂದಲೇ ಜಾರಿಯಾಗುವಂತೆ ಚಾರಣ ಶುಲ್ಕವನ್ನು ಪರಿಷ್ಕರಿಸಲಾಗಿದೆ. ಕಟ್ಟಿನಹೊಳೆಯ ಚೆಕ್’ಪೋಸ್ಟ್ ಮೂಲಕ ವಾಹನದಲ್ಲಿ ಕೊಡಚಾದ್ರಿಗೆ ತೆರಳುವ ವಯಸ್ಕ ಪ್ರವಾಸಿಗರಿಗೆ 50 ರೂ. ಮಕ್ಕಳಿಗೆ 25 ರೂ. ಶುಲ್ಕ ನಿಗದಿಪಡಿಸಲಾಗಿದೆ. ಹಿಡ್ಲುಮನೆ ಹಾಗೂ ವಳೂರು ಮೂಲಕ ಕೊಡಚಾದ್ರಿಗೆ ಹೋಗುವ ವಯಸ್ಕರು 100 ರೂ., ಮಕ್ಕಳಿಗೆ 50 ರೂ. ಶುಲ್ಕ ಹಾಗೂ ಕಟ್ಟಿನಹೊಳೆ, ಹಿಡ್ಲುಮನೆ ಮಾರ್ಗದ ಮೂಲಕ ಪಯಣ ಬೆಳೆಸುವ ವಿದೇಶಿಯರಿಗೆ 400 ರೂ. ಶುಲ್ಕ ನಿಗದಿಪಡಿಸಲಾಗಿದೆ. ಇನ್ನು ಟ್ರೆಕ್ಕಿಂಗ್ ಕೈಗೊಳ್ಳುವವರಿಗೆ ತಲಾ 300 ರೂ. ಶುಲ್ಕ ನಿಗದಿಪಡಿಸಲಾಗಿದೆ.
ವಾಹನದ ಪ್ರತಿ ಟ್ರಿಪ್ಪಿಗೆ 100 ರೂ ನಿಗದಿಪಡಿಸಲಾಗಿದ್ದು, ಗೈಡ್ ಅವಶ್ಯಕತೆ ಇದ್ದರೆ 1,000 ರೂ. ನಿಗದಿಪಡಿಸಲಾಗಿದೆ. ಒಳ ಪ್ರವೇಶಿಸಿದ ಮೇಲೆ ನಿಗದಿತ ಸಮಯಕ್ಕಿಂತ ಒಂದು ಘಂಟೆ ತಡವಾದರೆ 100 ರೂ. ಎರಡು ಗಂಟೆಗೆ 200 ರೂ. ಹೀಗೆ ದಂಡದ ಮೊತ್ತ ನಿಗದಿಪಡಿಸಲಾಗಿದೆ. ಅಷ್ಟೇ ಅಲ್ಲ ಕ್ಯಾಮೆರಾ ಲೆನ್ಸ್ ಆಧಾರದ ಮೇಲೆ 300,500 ಹಾಗೂ 1000 ರೂ. ಪಾವತಿಸಬೇಕಿದೆ.
ಆದಿ ಕಾಲದಿಂದಲೂ ಚಾರಣಕ್ಕೆ ಮುಕ್ತವಾಗಿದ್ದ ಕೊಡಚಾದ್ರಿ, 2015ಕ್ಕೂ ಮೊದಲು ಬೆಟ್ಟದ ತಪ್ಪಲಲ್ಲಿ ಉಚಿತ ಪ್ರವೇಶ ನಿಗದಿಸಿ ಗೇಟ್ ಹಾಕಲಾಗಿತ್ತು. ಬಳಿಕ ಚಾರಣಕ್ಕೆ 25 ರೂ. ನಿಗದಿಪಡಿಸಲಾಗಿತ್ತು. ಕೊಡಚಾದ್ರಿಗೆ ಪ್ರವೇಶ ಶುಲ್ಕ ನೀಡಿದವರು ಈ ಮೊದಲು ಉಚಿತವಾಗಿ ಹಿಡ್ಲುಮನೆ ಜಲಪಾತ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು ಅದಕ್ಕೀಗ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗಿದೆ.
2021ರ ಎಪ್ರಿಲ್ ತಿಂಗಳಿನಲ್ಲಿ ಚಾರಣದ ಶುಲ್ಕವನ್ನು ದುಪ್ಪಟ್ಟು ಮಾಡಲಾಗಿದೆ. ಇಲಾಖೆಯ ಈ ಅವೈಜ್ಞಾನಿಕ ಶುಲ್ಕ ಹೆಚ್ಚಳಕ್ಕೆ ಚಾರಣ ಪ್ರಿಯರು ಹಾಗೂ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಸಮಂಜಸ ಬೆಲೆಯನ್ನು ನಿಗದಿಪಡಿಸುವಂತೆ ಆಗ್ರಹಿಸಿದ್ದಾರೆ.