ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಈ ಭಾರಿಯೂ ಮಂತ್ರಿಗಿರಿ ಕೈತಪ್ಪಿದ್ದನ್ನು ಖಂಡಿಸಿ ಅವರ ಬೆಂಬಲಿಗರು ಬುಧವಾರ ಬೆಂಗಳೂರಿನ ಕಾವೇರಿ ನಿವಾಸದ ಎದುರು ಪ್ರತಿಭಟನೆ ನಡೆಸಿದರು.
ಹಾಲಾಡಿ ಅವರಿಗೆ ಮಂತ್ರಿಸ್ಥಾನ ನೀಡಿ ಎನ್ನುವ ಬೋರ್ಡ್ ಹಿಡಿದು ಕೆಲಕಾಲ ಪ್ರತಿಭಟಿಸಿದ್ದು ಬಳಿಕ ಪೊಲೀಸರು ಪ್ರತಿಭಟನೆಯನ್ನು ಮೊಟಕುಗೊಳಿಸಿದರು. ಈ ವೇಳೆ ಜೈ ಭಾರ್ಗವ ಬಳಗದ ಅಜಿತ್ ಶೆಟ್ಟಿ ಕಿರಾಡಿ, ವಸಂತ್ ಗಿಳಿಯಾರ್, ಹರೀಶ್ ಶೆಟ್ಟಿ ಅರೆಶಿರೂರು, ಅಜಿತ್ ಉಳ್ತೂರು ಸೇರಿದಂತೆ ಇನ್ನಿತರರು ಇದ್ದರು.
ಕುಂದಾಪುರ ಕ್ಷೇತ್ರಕ್ಕಿಲ್ಲ ಮಂತ್ರಿಸ್ಥಾನ:
ನಾಲ್ಕು ಭಾರಿ ಬಿಜೆಪಿ ಪಕ್ಷದಿಂದ ಹಾಗೂ ಒಂದು ಭಾರಿ ಪಕ್ಷೇತರವಾಗಿ ಗೆದ್ದು ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಈ ಭಾರಿ ಮಂತ್ರಿ ಪದವಿಗೆ ಪರಿಗಣಿಸಬೇಕು ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನ ಆರಂಭಿಸಿದ್ದರು. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ತಾನು ಮಂತ್ರಿ ಪದವಿಗಾಗಿ ಯಾರ ಕಾಲಿಗೂ ಬಿಳುವುದಿಲ್ಲ. ಉತ್ತಮ ಪದವಿ ಸಿಕ್ಕರೆ ಮಂತ್ರಿ ಕಾರು, ಗನ್’ಮ್ಯಾನ್ ಪಡೆಯದೇ ಚನ್ನಾಗಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದ್ದರು.
ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಯಾವ ಸರಕಾರವಿರುವಾಗಲೂ ರಾಜ್ಯ ಸಚಿವ ಸಂಪುಟದಲ್ಲಿ ಈವರೆಗೆ ಪ್ರಾತಿನಿಧ್ಯ ದೊರೆತಿಲ್ಲ ಎಂಬ ಬೇಸರ ಕ್ಷೇತ್ರದ ಜನರಲ್ಲಿದೆ. ರಾಜ್ಯ ಬಿಜೆಪಿ ಸರಕಾರ ಮೊದಲ ಭಾರಿಗೆ ಅಸ್ತಿತ್ವಕ್ಕೆ ಬಂದಿದ್ದಾಗ ಸಚಿವ ಸಂಪುಟ ವಿಸ್ತರಣೆಯ ವೇಳೆಗೆ ಹಾಲಾಡಿಯವರನ್ನು ಬೆಂಗಳೂರಿಗೆ ಕರೆಯಿಸಿ ಮಂತ್ರಿ ಪದವಿ ನೀಡಿರಲಿಲ್ಲ. ಬಳಿಕ ಅವರ ಪಕ್ಷೇತರವಾಗಿ ಸ್ಪರ್ಧಿಸಿ ಅಧಿಕ ಬಹುಮತದೊಂದಿಗೆ ಗೆದ್ದಿದ್ದರು.