ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರಿನ ರಾಷ್ಟ್ರೀಯ ಹೆದ್ದಾರಿಯಿಂದ ಸೀತಾರಾಮಚಂದ್ರ ದೇವಾಲಯದ ಎದುರಿನ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ನಾಕಟ್ಟೆ ರಸ್ತೆಯ ಕಳೆದ ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ಹಾಳು ಕೊಂಪೆಯಾದಂತಾಗಿದೆ.
ರಾಷ್ಟ್ರೀಯ ಹೆದ್ದಾರಿಯಿಂದ ತೀರಾ ತಗ್ಗು ಪ್ರದೇಶದಲ್ಲಿರುವ ಈ ರಸ್ತೆಯು ಸಂಪೂರ್ಣ ಕಿತ್ತು ಹೋಗಿದ್ದು ಮೊಳಕಾಲು ಮಟ್ಟಕ್ಕೆ ನೀರು ತುಂಬಿ ಹೊಳೆಯಂತೆ ಭಾಸವಾಗುತ್ತದೆ. ಕಿತ್ತು ಹೋದ ಕಾಂಕ್ರೀಟ್ ರಸ್ತೆ ಕೆಸರುಮಯವಾಗಿದ್ದು, ರಸ್ತೆಯ ಬದಿಯಂಚು ಗಮನಿಸದೆ ಎಷ್ಟೊ ಬೈಕ್ ಸವಾರರು ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಅರ್ಧ ಮಾರ್ಗ ಮಾತ್ರವೇ ಕಾಂಟ್ರಿಕ್ ಮಾಡಲಾಗಿದ್ದು, ಸ್ವಲ್ಪ ಭಾಗವನ್ನು ಹಾಗೇಯೇ ಬಿಡಲಾಗಿದೆ. ನಾಕಟ್ಟೆಯಿಂದ ಬೈಂದೂರು ಸೀತಾರಾಮಚಂದ್ರ ದೇವಾಲಯ ಹಾಗೂ ಮುಸ್ಲಿಂ ಕೇರಿಗೆ ನೇರ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಇದನ್ನು ಬಿಟ್ಟರೆ ಜನ ಬೈಂದೂರು ಪೇಟೆ ಇಲ್ಲವೇ ಯಡ್ತರೆ ಜಂಕ್ಷನ್ ಮೂಲಕ ಸುತ್ತಿ ಬಳಸಿ ಹೋಗಬೇಕಾದ ಅನಿವಾರ್ಯತೆ ಇದೆ.
ರಸ್ತೆಯ ಅವ್ಯವಸ್ಥೆಯ ಕುರಿತು ಈಗಾಗಲೇ ಹಲವಾರು ಬಾರಿ ಸ್ಥಳೀಯಾಡಳಿತದ ಗಮನಕ್ಕೆ ತಂದರೂ ಎನು ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿರುವ ರಸ್ತೆಯ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶೀಘ್ರ ಗಮನಹರಿಸಿ ಶಾಶ್ವತ ಪರಿಹಾರ ಕಲ್ಪಿಸಿಕೊಡುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ವರದಿ: ರವಿರಾಜ್ ಬೈಂದೂರು