ನಾಗರಾಜ ಪಿ. ಯಡ್ತರೆ
ಮೊನ್ನೆ ಒಬ್ಬ ವಿದ್ಯಾರ್ಥಿ ಪೋನ್ ಮಾಡಿ sir, what is the difference between market and marketing? ಅಂತ ಕೇಳ್ದ. ಮಾರ್ಕೆಟಿಂಗ್ ಅಂದ ಕೂಡಲೆ ನನಗೆ ನೆನಪಾದದ್ದು ಇವತ್ತಿನ ಜೀವನದಲ್ಲಿ ಹೇಗೆ ಮಾರ್ಕೇಟಿಂಗ್ ಬೃಹಸ್ಪತಿಗಳು ಕಲರ್ ಕಲರ್ ಮಕ್ಮಲ್ ಟೋಪಿ ಹಿಡಿದುಕೊಂಡು ಜನರನ್ನು ಕಾಯುತ್ತಿರುತ್ತಾರೆ ಅಂತ. ಒಂದು ಚಿಕ್ಕ ಉದಾಹರಣೆ ನೋಡಿ. ಹಿಂದಿನ ಕಾಲದಲ್ಲಿ ಜನರು ಬೆಳಿಗ್ಗೆ ಹಲ್ಲುಜ್ಜಲು ಇದ್ದಿಲು ಅಥವಾ ಉಪ್ಪು ಬಳಸೋದು ಸಾಮಾನ್ಯವಾಗಿತ್ತು. ನಾವು ಚಿಕ್ಕವರಾಗಿದ್ದಾಗ ಬಳಸುತ್ತಿದ್ದೆವು. ನಂತರ ಹಲ್ಲುಜ್ಜಲು ವಿವಿಧ ನಮೂನೆಯ ಟೂತ್ ಪೇಸ್ಟ್‌ಗಳು ಬಂದವು. ಸ್ವಲ್ಪ ಸಿಹಿಯಾದ ಈ ಪೇಸ್ಟ್‌ಗಳು ಜನರ ಜೀವನದ ಒಂದು ಅವಿಭಾಗ್ಯ ಅಂಗವಾಯಿತು. ನೂರಾರು ಕಂಪೆನಿಗಳು ಇದನ್ನು ತಯಾರಿಸಿದವು. ಆದರೆ ಇದ್ದಕ್ಕಿದ್ದಂತೆ ಒಂದು ಬೆಳಿಗ್ಗೆ ಟೂತ್ಪೇಸ್ಟ್ ಕಂಪೆನಿಯೊಂದು ’ನಿಮ್ಮ ಪೇಸ್ಟ್ನಲ್ಲಿ ಉಪ್ಪಿ ಇದೆಯೇ?’ ಅಂತ ಕೇಳಿತು. ಆದರೆ ಜನ ಯಾರೂ ಉಪ್ಪು ನಮ್ಮ ಮನೆಯಲ್ಲಿಯೇ ಇದೆ. ನಾವು ಅದರಲ್ಲೇ ಹಲ್ಲು ಉಜ್ಜುತ್ತೇವೆ ನಿಂದು ಯಾರಿಗೆ ಬೇಕು? ಅಂತ ಕೇಳಿಲ್ಲ. ಸ್ವಲ್ಪ ದಿನದ ನಂತರ ಅದೇ ಕಂಪೆನಿ ’ನಿಮ್ಮ ಪೇಸ್ಟ್ನಲ್ಲಿ ಉಪ್ಪು ಹಾಗೂ ನಿಂಬೆ ಇದೆಯೇ’ ಅಂತ ಕೇಳಿತು. ನಾನಂತೂ ದಿಗಿಲುಕೊಂಡು ಬೇರೆ ಕಂಪೆನಿ ಪೇಸ್ಟ್ ತಗೊಂಡೆ ಯಾಕೆಂದರೆ ಇನ್ನು ಕೆಲವು ದಿನಗಳಲ್ಲಿ ಆ ಕಂಪೆನಿ ಇದ್ದಿಲು, ಲವಂಗ, ದಾಲ್ಜಿನಿ ಎಲ್ಲಾ ಹಾಕಿ ದಿನಕ್ಕೊಂದು ಟೋಪಿ ಹೊಲಿಸುತ್ತದೆ ಎಂದು ನನಗೆ ಅಂದಾಜಾಯಿತು.
ಹೀಗೆ ಜನರ ಜೀವನಶೈಲಿ ಸುಧಾರಿಸುತ್ತಿದ್ದಂತೆ, ಆರೋಗ್ಯದ ಕಡೆಗೆ ಜನರು ಗಮನ ಹರಿಸಲು ಪ್ರಾರಂಭಿಸಿದರು. ಇಂತಹ ಸಂದರ್ಭದಲ್ಲಿ ಹಣದ ಬಗ್ಗೆ ಚಿಂತಿಸದೇ ತಮ್ಮ ಆರೋಗ್ಯದ ಕಡೆಗೆ ಗಮನ ಕೊಟ್ಟು ಎಲ್ಲಿ, ಏನು ವಿಶೇಷವಾದದ್ದು ಸಿಗುತ್ತದೆ ಎಂದು ಕಣ್ಣು ಬಿಟ್ಟು ನೋಡುತ್ತಿದ್ದಂತೆ, ಎಲೆಕ್ಟ್ರಾನಿಕ್ ಮಾಧ್ಯಮಗಳು ದಿನಾ ಬೆಳಿಗ್ಗೆ ಆರೋಗ್ಯ, ಯೋಗ, ಜಾತಕ ಈ ಬಗೆಯ ಕಾರ್ಯಕ್ರಮಗಳನ್ನು ಬಿತ್ತರಿಸಿ ಜನರಿಗೆ ವಿಪರೀತ ಗೊಂದಲ ಉಂಟುಮಾಡಲು ಪ್ರಾರಂಭಿಸಿದವು. ಇದು ಎಲ್ಲಿಯವರೆಗೆ ಹೋಯಿತೆಂದರೆ ಬೆಳಿಗ್ಗೆ ಶ್ವಾಸ ತೆಗೆದುಕೊಳ್ಳಲೂ ಒಬ್ಬ ಶ್ವಾಸಗುರು ಬಂದ್ರು. ಶ್ವಾಸ ತಗೊಳ್ಳಕ್ಕೂ ಒಬ್ಬ ಶ್ವಾಸ ಗುರುನಾ? ಅಂತ ಕೇಳ್ಬೆಡಿ. ಶ್ವಾಸ ತಗೊಳ್ಳೋದು ಒಂದು ಪ್ರಾಡೆಕ್ಟ್ ಆಗಿ ಹೋಯ್ತು. ನನ್ನ ಸ್ನೇಹಿತರೊಬ್ಬರು ಹೇಳುತ್ತಿದ್ದರು, ‘ಇನ್ನು ಉಚ್ಚೆ ಹೊಯ್ಯಲಿಕ್ಕೂ’ ಗುರು ಬರುತ್ತಾರೆ ಅಂತ. ದಿನ ಭವಿಷ್ಯ ಮಾತ್ರ ಇನ್ನೂ ಭಯಂಕರ. ’ಇವತ್ತು ನಿಮಗೆ ಆಗುವ ಅನಿಷ್ಠ ದೂರ ಆಗಬೇಕೆಂದರೆ, ’ಓಂ ಹ್ರಾಂ, ಹ್ರೀಂ ರುಂಡಧಾರೀಣಿಯೇ ನಮಃ’ ಅಂತ ಸಾವಿರದ ಒಂದು ಬಾರಿ ಜಪ ಮಾಡಿ ಅಂತ ಹುಕುಂ ಹೊರಡಿಸುತ್ತಿದ್ದಂತೆಯೇ ಹೇಗೆ ನಗಬೇಕು ಎಂದು ಗೊತ್ತಾಗುವುದಿಲ್ಲ. ಯಾಕೆಂದ್ರೆ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುವ ಗಡಿಬಿಡಿಯಲ್ಲೇ ಸಾವಿರದ ಒಂದು ಕೆಲಸದ ಒತ್ತಡದಲ್ಲಿ ಇವರು ಹೇಳುವ ಜಪ ಮಾಡುತ್ತಾ ಕುಳಿತರೆ ಮಧ್ಯಾಹ್ನ 12 ಗಂಟೆ ಆಗೋದು ಗ್ಯಾರೆಂಟಿ ಅಲ್ವಾ?
ನಿಮಗೆ ಇನ್ನೊಂದು ವಿಷಯ ಗೊತ್ತಾ? ಇದು ನಿಜ ಸಂಗತಿ. ಸುಳ್ಳು ಅಂತ ತಿಳ್ಕೊಬೇಡಿ. ಇಂದಿನ ಆಧುನಿಕ ಯುಗದಲ್ಲಿ ಹೇಗೆ ಖಾಯಿಲೆಯನ್ನು, ಖಾಯಿಲೆಗೆ ಡಾಕ್ಟರನ್ನೂ ಹೇಗೆ ವಿಭಾಗ ಮಾಡುತ್ತಾರೆ ನೋಡಿ. ನಮ್ಮೂರಲ್ಲಿ ಒಬ್ಬ ಡಾಕ್ಟರ್ ಇದ್ದಾರೆ. ನಮಗೆ ಯಾವ ಖಾಯಿಲೆ ಬಂದರೂ ಅವರೇ ಡಾಕ್ಟರ್. ಜ್ವರ ಬರಲಿ, ತಲೆನೋವು ಬರಲಿ, ಗಾಯ ಆಗಿರಲಿ, ಹಲ್ಲು ನೋವು ಬರಲಿ, ಹೊಟ್ಟೆನೋವು ಬರಲಿ. ಏನೇ ಆದ್ರೂ ಒಬ್ರೇ ಡಾಕ್ಟರ್. ಆದರೆ ಇತ್ತೀಚೆಗೆ ಪ್ರತಿಯೊಂದು ಖಾಯಿಲೆಗೂ ಬೇರೆ ಬೇರೆ ಡಾಕ್ಟರ್. ಅದರಲ್ಲೂ ಮತ್ತೆ ಸಬ್ ಡಿವೈಡ್. ಮೊನ್ನೆ ಒಂದು ಹಲ್ಲು ಡಾಕ್ಟರ್ ಶಾಪ್ ಎದುರಿನ ಬೋರ್ಡ್ ನೋಡಿ ಶಾಕ್ ಆದೆ. ಯಾಕಂದ್ರೆ ’ಕೋರೆ ಹಲ್ಲಿನ ಡಾಕ್ಟರ್ ಬುಧವಾರ ಮತ್ತು ಶುಕ್ರವಾರ ಲಭ್ಯರಿರುತ್ತಾರೆ’ ಅಯ್ಯಬ್ಬ! ’ಕೋರೆ ಹಲ್ಲು ಇರುವ ಡಾಕ್ಟರಾ?’ ಹೇಗಿರುತ್ತಾರೆ ಅಂತ ಭಯ ಶುರುವಾಯ್ತು. ಅನಂತರ ಗೊತ್ತಾಯಿತು. ನಮ್ಮ ಬಾಯೊಳಗಿರುವ 32 ಹಲ್ಲುಗಳಿಗೂ 32 ಬಗೆಯ ಡಾಕ್ಟರ್ ಇದ್ದಾರೆ ಅಂತ. ಬಾಚಿಹಲ್ಲು, ಕೋರೆಹಲ್ಲ, ಅರೆಯುವ ಹಲ್ಲು, ದವಡೆ ಹಲ್ಲು. ಎಲ್ಲದಕ್ಕೂ ಒಬ್ಬೊಬ್ಬ ಡಾಕ್ಟರ್.
ಹಿಂದೆಲ್ಲಾ ಒಬ್ಬ ವ್ಯಕ್ತಿ ವಿದ್ಯೆ ಕಲಿತು, ಯಾವುದೇ ಉದ್ಯೋಗ ಇಲ್ಲದಿದ್ದರೇ ಅವನು ರಸ್ತೆ ಬದಿಯಲ್ಲೋ, ಪೇಟೆಯಲ್ಲೋ ಒಂದು ಗೂಡಂಗಡಿ ಅಥವಾ ಬೀಡಾ ಅಂಗಡಿ ಹಾಕೋದು ಸಾಮಾನ್ಯವಾಗಿತ್ತು. ಅದು ಅವನ ಹೊಟ್ಟೆಪಾಡು. ಆದರೆ ಈಗ ಈ ಗೂಡಂಗಡಿ ಹಾಕಲಿಕ್ಕೂ ಡಬಲ್ ಡಿಗ್ರಿ ಬೇಕಾಗುತ್ತೆ ಅಂತ ಕಾಣುತ್ತೆ. ಯಾಕಂದ್ರೆ ಇವತ್ತು ಬರುವ ಆ ಸಾವಿರಾರು ಹೆಸರಿನ ಚಾಕೋಲೆಟ್ ಜಾಹೀರಾತನ್ನು ಕೇಳಿ ಮಕ್ಕಳು ಅಂಗಡಿಯಲ್ಲಿ ಅದನ್ನು ಕೇಳೋದು. ಅಬ್ಬ! ತಲೆ ಚಿಟ್ಟು ಹಿಡಿಯಬಹುದು. ನೂರಾರು ಹೆಸರಿನ ಗುಟ್ಕಾ ಮಾಲೆಗಳು, ಲೇಸ್, ಕುರ್ಕುರಿ, ಪರ್ಕ್ ಅದರಲ್ಲೂ ವಿಧಗಳು! ನೀವೇ ಯೋಚನೆ ಮಾಡಿ ಒಂದು ಕಂಪೆನಿಯ ಮುಖಕ್ಕೆ ಹಚ್ಚುವ ಕ್ರೀಮ್, ಯುವಕರಿಗೆ ಒಂದು ಬಗೆ, ಮಹಿಳೆಯರಿಗೆ ಇನ್ನೊಂದು ಬಗೆ, ಮಕ್ಕಳಿಗೆ ಮತ್ತೊಂದು ಬಗೆ. ಮುಖಕ್ಕೆ ಹಚ್ಚುವ ಕ್ರೀಮ್ನಲ್ಲೂ ಮಲ್ಟಿವಿಟಮಿನ್ ಅಂತೆ. ನಗು ಬರೋದಿಲ್ವಾ? ಎಂಥ ಜರತಾರಿ ಟೋಪಿ ನೋಡಿ.
ನಾನು ಹೇಳಿದ ಈ ಮೇಲಿನ ವಿಷಯವನ್ನೆಲ್ಲಾ ಗಂಭೀರವಾಗಿ ಆಲೋಚಿಸಿದಾಗ ಜಾಹೀರಾತುಗಳು, ಜಾಹೀರಾತು ಮಾಧ್ಯಮಗಳು, ಮಾರ್ಕೆಟಿಂಗ್‌ನ ಕಬಂಧ ಬಾಹುಗಳು ಹೇಗೆ ನಮ್ಮನ್ನು ಸುತ್ತುವರಿದಿದೆ ಅಂತ ತಿಳಿಯುತ್ತೆ. ತೀರಾ ಸಾಮಾನ್ಯ ವಸ್ತುವಾದ ಅಡುಗೆ ಉಪ್ಪಿಗೂ ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚುಮಾಡುವ ಕಂಪೆನಿಗಳು ಎಷ್ಟರ ಮಟ್ಟಿಗೆ ನಮಗೆ ಗುಣಮಟ್ಟದ ವಸ್ತುಗಳನ್ನು ಕೊಡುತ್ತದೆ? ಉತ್ತಮ ಗುಣಮಟ್ಟದ್ದೇ ಆಗಿದ್ದರೂ ಅದರ ಉತ್ಪಾದನಾ ವೆಚ್ಚವೆಷ್ಟು? ನಾವು ಕೊಡುತ್ತಿರುವುದೆಷ್ಟು? ಅಂತ ಯೋಚಿಸಬೇಕಾಗುತ್ತದೆ. ಏನು ಮಾಡೋದು ಕಾಲವೇ ಬದಲಾದ ಮೇಲೆ ನಾವು ಅದಕ್ಕೆ ತಕ್ಕಂತೆ ಕುಣಿಯಬೇಕು ಅಲ್ವಾ?