ಅಕ್ಟೋಬರ್ ತಿಂಗಳು ಬಂದ ಕ್ಷಣ ಕೋಟ ಪರಿಸರದಲ್ಲಿ ಒಂದು ಹಬ್ಬದ ವಾತಾವರಣ, ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮದ ಹಬ್ಬವೇ ಎನ್ನಬಹುದೆನೋ, ಕೋಟ ಎಂದಾಕ್ಷಣ ಮೊದಲು ಎರಿಗೂ ನೆನಪಾಗುವುದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ನೆನಪು. ಕೋಟ ಎನ್ನುವ ಚಿಕ್ಕ ಊರನ್ನು ಪ್ರಪಂಚದಾದ್ಯಂತ ಪಸರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಹುಟ್ಟಿ ಬೆಳೆದ ತವರೂರಿನಲ್ಲಿ ಅವರ ಹುಟ್ಟಿದ ದಿನದ ಸಂಭ್ರಮ ಕಾರ್ಯಕ್ರಮಗಳ ಮೂಲಕ ಆಚರಿಸಿ ನಡೆದಾಡುವ ವಿಶ್ವಕೋಶನಿಗೊಂದು ವಿಶಿಷ್ಟ ರೀತಿಯಲ್ಲಿ ನಮಿಸುವುದು ಅವರಿಗೆ ಹುಟ್ಟೂರಿನಲ್ಲಿ ಕೊಡುವ ಅಭಿಮಾನದ ಗೌರವ.
ಸಾಹಿತ್ಯಿಕ ಸಾಂಸ್ಕೃತಿಕ ಸುಗ್ಗಿ
ಕಾರಂತರ ನೆನಪಿನಲ್ಲಿ ಅವರ ಬದುಕು -ಬರಹವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಕಾರಂತ ಥೀಮ್ ಪಾರ್ಕ್ ತಲೆ ಎತ್ತಿ ನಿಂತಿದೆ. ದಿನನಿತ್ಯ ಎಂಬಂತೆ ಸಾಹಿತ್ಯಿಕ -ಸಾಂಸ್ಕೃತಿಕ ಚಟುವಟಿಕೆ ನಡೆದು ಸಾಂಸ್ಕೃತಿಕ ರಾಯಭಾರಿ ಎನ್ನುವ ಮಟ್ಟಿಗೆ ಬೆಳೆದು ನಿಂತಿರುವುದು ಹೆಮ್ಮೆಯ ಸಂಗತಿ. ಪ್ರತಿ ವರ್ಷ ಕಾರಂತೋತ್ಸವದ ಅಂಗವಾಗಿ ೧೦ ದಿನಗಳ ಕಾಲ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಒಂದು ಸಂಪ್ರದಾಯ. ಈ ನಿಟ್ಟಿನಲ್ಲಿ ಹತ್ತು ದಿನಗಳ ಕಾಲ ವಿವಿಧ ಗೋಷ್ಠಿ, ಕಾರಂತ ಚಿಂತನ, ಸಮ್ಮೇಳನ, ಯಕ್ಷಗಾನ , ನೃತ್ಯ ವೈವಿಧ್ಯ, ನಾಟಕ ಇಂತಹ ಹಲವಾರು ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಕಳೆದ ಸಾಲಿನಲ್ಲಿ ಕೋವಿಡ್ ಸಮಯದಲ್ಲೂ ಆನ್ ಲೈನ್ ಮೂಲಕ ಕಾರ್ಯಕ್ರಮ ನಡೆಸಿದುದು ಒಂದು ಹೆಗ್ಗಳಿಕೆ.
ನಿರೂಪಿತ ಹತ್ತು ದಿನಗಳ ಸಾಹಿತ್ಯಿಕ ಸಾಂಸ್ಕೃತಿಕ ರಸದೌತಣ
ಈ ಸಲವು ಹತ್ತು ದಿನಗಳ ಕಾಲ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಇಂದು ಕಾರಂತರ ಮಗಳು ಕ್ಷಮಾ ರಾವ್ ತಂದೆಯೊಂದಿಗಿನ ನೆನಪಿನ ದಿಬ್ಬಣವನ್ನು ಅನಾವರಣಗೊಳಿಸಲಿದ್ದಾರೆ, ಅಕ್ಟೋಬರ್ 2ರಂದು ಹಿರಿಯ ಸಾಹಿತಿ ಎ.ಎಸ್.ಎನ್ ಹೆಬ್ಬಾರ್ ಅವರು ಕಾರಂತ ಕೊನೆಯ ದಿನಗಳ ಬಗ್ಗೆ ಮೆಲುಕು ಹಾಕಲಿದ್ದಾರೆ. ಸಿನಿಮಾ ಗೀತೆಗಳಿಗೆ ಹೊಸ ಆಯಾಮ ನೀಡಿದ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಅಕ್ಟೋಬರ್ 3ರಂದು ಜೊತೆಗಿರಲಿದ್ದಾರೆ. ಅಕ್ಟೋಬರ್ 4ರಂದು ಒಂಟಿ ಬೈಕ್ ಸವಾರಿ ಮೂಲಕ ವಿವಿಧ ಭಾಗಗಳಿಲ್ಲಿ ಸುತ್ತಿ ಮನೆ ಮಾತಾಗಿರುವ ಯುವ ಸಾಹಿತಿ ಅರ್ಚನ ಆರ್ಯ ಅವರು ನುಡಿ ತೋರಣ ಮಾಡಲಿದ್ದು, ಅಕ್ಟೋಬರ್ 5 ರಂದು ಖ್ಯಾತ ವಾಗ್ಮಿ ಕೃಷ್ಣ ಭೈರೇಗೌಡ ಅವರ ಮಾತಿನ ಝೇಂಕಾರ ನಡೆಯಲಿದ್ದು ಇದು ವೆಬಿನಾರ್ ಮೂಲಕ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ ಅಕ್ಟೋಬರ್ 6ರಂದು ತಂತ್ರಾಡಿ ಶ್ರೀ ದುರ್ಗಾ ಪರಮೇಶ್ವರಿ ಕಲಾತಂಡ ಇವರಿಂದ ವೀರ ರಾಣಿ ಕಿತ್ತೂರು ಚೆನ್ನಮ್ಮ ಯಕ್ಷಗಾನ ನಡೆಯಲಿದ್ದು, ಅಕ್ಟೋಬರ್7ರಂದು ಗಮ್ಜಲ್ ಕುಂದಾಪ್ರ ತಂಡದಿಂದ ಗಂಡ್ ಕೂತ್ ಕೆಡ್ತ್ ಹೆಣ್ ತಿರ್ಗಿ ಕೆಡ್ತ್ ಎನ್ನುವ ವಿಷಯಾಧಾರಿತ ಹರಟೆ ಕಾರ್ಯಕ್ರಮದ ಮೂಲಕ ರಂಜಿಸಲಿದ್ದು, ಅಕ್ಟೋಬರ್ ೮ರಂದು ನೆನಪು ಫೌಂಡೇಷನ್ ಸಾಸ್ತಾನ ಇವರಿಂದ ಡಾ. ರಾಜ್ ಗಾನಾಮೃತ ಕಾರ್ಯಕ್ರಮ ನಡೆಯಲಿದ್ದು, ಅಕ್ಟೋಬರ್ 9ರಂದು ಈಶಲಾಸ್ಯ ನೃತ್ಯ ಕಲಾತಂಡ ಚಿತ್ರಪಾಡಿ-ಸಾಲಿಗ್ರಾಮ ಇವರಿಂದ ನೃತ್ಯ ವೈಭವ ನಡೆಯಲಿದೆ, ಅಕ್ಟೋಬರ್ 10ರಂದು ಛಂದೋಬದ್ದ ಯಕ್ಷ ಕವಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ಸಾರಥ್ಯದಲ್ಲಿ ಬಡಗುತಿಟ್ಟಿನ ಉದಯೋನ್ಮುಖ ಗಾನ ಪ್ರತಿಭೆ ಕುಮಾರಿ ಚಿಂತನ ಹೆಗಡೆ ಮಾಳ್ಕೋಡು ಅವರ ಭಾಗವತಿಕೆಯಲ್ಲಿ ಯಕ್ಷ-ಗಾನ ವೈಭವ ಕಾರ್ಯಕ್ರಮ ನಡೆಯಲಿದ್ದು ಎಲ್ಲಾ ಕಾರ್ಯಕ್ರಮ ಕಾರಂತ ಥೀಮ್ ಪಾರ್ಕ್‌ನ ಫೇಸ್ ಬುಕ್ ಹಾಗೂ ಯುಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿದೆ.
ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ
ಕೋಟತಟ್ಟು ಗ್ರಾಮ ಪಂಚಾಯತ್ ಕೋಟ, ಡಾ. ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಸಹಭಾಗಿತ್ವದಲ್ಲಿ ಕಳೆದ ಹದಿನಾರು ವರುಷಗಳಿಂದ ಕಾರಂತರ ವಿವಿಧ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಡಾ. ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರ ನೀಡುತ್ತಾ ಬಂದಿದೆ. 2005ರಲ್ಲಿ ಆರಂಭವಾದ ಹುಟ್ಟೂರ ಪ್ರಶಸ್ತಿ ಕಾರ್ಯಕ್ರಮ 16 ವರ್ಷಗಳಿಂದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಾ ಬಂದಿದೆ.
ಈಗಾಗಲೇ ವೀರಪ್ಪ ಮೊಯ್ಲಿ, ವೆಂಕಟಾಚಲ, ಕೆ.ರಾಮಕೃಷ್ಣ ಹಂದೆ, ರವಿ ಬೆಳಗೆರೆ, ಗಿರೀಶ ಕಾಸರವಳ್ಳಿ, ಜಯಶ್ರೀ, ಮೋಹನ ಆಳ್ವ, ಸಾಲು ಮರದ ತಿಮ್ಮಕ್ಕ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಯಂತ ಕಾಯ್ಕಿಣಿ, ಸದಾನಂದ ಸುವರ್ಣ, ಡಾ. ಬಿ. ಎಂ ಹೆಗ್ಡೆ, ಪ್ರಕಾಶ್ ರೈ, ಪಡ್ರೆ, ಕವಿತಾ ಮಿಶ್ರ, ನಾಡೋಜ ಡಾ.ಎಸ್.ಎಲ್.ಭೈರಪ್ಪ ಅವರಿಗೆ ಪ್ರದಾನ ಮಾಡಲಾಗಿರುತ್ತದೆ.
ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ 2021ರ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ‘ಗಿರೀಶ್ ಭಾರದ್ವಾಜ್’ ಅವರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ‘ಸೇತುಬಂಧು’ ಎಂದೇ ಕರೆಯಲ್ಪಡುವ ಗಿರೀಶ್ ಭಾರದ್ವಾಜ್ ಗ್ರಾಮೀಣ ಪ್ರದೇಶದ ಜನರ ಜೀವನದಲ್ಲಿ ಹೊಸ ಬೆಳಕು ಮೂಡಿಸುವಂತೆ 130 ತೂಗು ಸೇತುವೆ ನಿರ್ಮಾಣ ಮಾಡಿದವರು. ಅಲ್ಲದೇ ಸಮಾಜ ಸೇವೆಯಲ್ಲೂ ಕ್ರೀಯಾಶೀಲರಾದವರು. ಇವರ ಸಾಧನೆಯನ್ನು ಪರಿಗಣಿಸಿ ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ತೂಗು ಸೇತುವೆಯ ಹರಿಕಾರ ಗಿರೀಶ್ ಭಾರದ್ವಜ್
ಸುಳ್ಯ ತಾಲೂಕು ಗಾಂಧಿ ನಗರದವರಾದ 71 ವರ್ಷ ಪ್ರಾಯದ ಗಿರೀಶ್ ಭಾರದ್ವಜ್ ಅವರು ಮಂಡ್ಯದ ಪಿಇಎಸ್ ಕಾಲೇಜಿನಿಂದ 1973ರಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಪದವಿ ಪಡೆದಿದ್ದಾರೆ. ಪದವಿಯ ಬಳಿಕ ಅವರು ಕೈಗೊಂಡಿದ್ದು ಹಳ್ಳಿ-ಹಳ್ಳಿಗಳು ಹಾಗೂ ಜನರ ನಡುವೆ ಸೇತುವೆ ಕಟ್ಟುವ ಕಾಯಕವನ್ನು. ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಹೊರಜಗತ್ತಿನೊಂದಿಗೆ ಸಂಪರ್ಕವೇ ಇಲ್ಲವಾಗುವ ಹಳ್ಳಿಗಳಲ್ಲಿ ತೂಗುಸೇತುವೆ ಮೂಲಕ ಸಂಪರ್ಕ ಕಲ್ಪಿಸುವ ಅವರ ಯೋಜನೆ ಇಂದು ಅಭಿಯಾನ ರೂಪ ಪಡೆದುಕೊಂಡಿದೆ. ತಮ್ಮೂರಿನ ಪಯಸ್ವಿನಿ, ನೇತ್ರಾವತಿಯಿಂದ ಪ್ರಾರಂಭಿಸಿ ತುಂಗಾ, ಭದ್ರ, ಕಾವೇರಿ, ಶರಾವತಿ, ಸೀತಾನದಿ,ಸ್ವರ್ಣ ಸೇರಿದಂತೆ ರಾಜ್ಯದ ಹೆಚ್ಚಿನೆಲ್ಲಾ ಸೇತುವೆಗಳಿಗೆ ತೂಗು ಸೇತುವೆ ನಿರ್ಮಿಸಿದ್ದಾರೆ.ಕರ್ನಾಟಕದಲ್ಲಿ ಮಾತ್ರವಲ್ಲದೇ ಆಂದ್ರ ಪ್ರದೇಶ, ಕೇರಳ ಹಾಗೂ ಒರಿಸ್ಸಾ ರಾಜ್ಯಗಳಿಂದಲೂ ಬಂದ ಬೇಡಿಕೆಯಂತೆ ಅಲ್ಲೂ ತೂಗು ಸೇತುವೆಗಳನ್ನು ನಿರ್ಮಿಸಿದ್ದಾರೆ. ಇದೀಗ ಶ್ರೀಲಂಕ ದೇಶ ಸೇರಿದಂತೆ ಇತರ ರಾಜ್ಯಗಳಿಂದಲೂ ಸೇತುವೆಗಳ ನಿರ್ಮಾಣಕ್ಕೆ ಬೇಡಿಕೆಗಳು ಬರುತ್ತಿವೆ. ಸಾಮಾಜಿಕ ಕಾರ್ಯಗಳಲ್ಲೂ ಇದರ ಜೊತೆಗೆ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಹಲವಾರು ಸಂಸ್ಥೆಗಳು ಗೌರವಿಸಿದೆ ಮಾತ್ರವಲ್ಲದೇ ಜಿಲ್ಲಾ -ರಾಜ್ಯ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಭಾರತ ಸರಕಾರ ಕೊಡಮಾಡುವ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರ ಇವರಿಗೆ ನೀಡಿ ಗೌರವಿಸಿದ್ದು ಇವರ ಬದುಕಿನ ಒಂದು ಮೈಲಿಗಲ್ಲೇ ಸರಿ.















