ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯ ಎಲ್ಲಾ 155 ಗ್ರಾಮ ಪಂಚಾಯತ್ ಗಳು ಕಸ ಸಂಗ್ರಹಣೆ ಮತ್ತು ವಿಲೇವಾರಿ ಹಾಗೂ ಕಸ ಸಂಗ್ರಹಣೆಗೆ ಪ್ರತ್ಯೇಕ ವಾಹನ ವ್ಯವಸ್ಥೆ ಹೊಂದುವ ಮೂಲಕ ಉಡುಪಿ ಜಿಲ್ಲೆಯನ್ನು ಓಡಿಎಫ್+1 ಜಿಲ್ಲೆಯನ್ನಾಗಿ ಘೋಷಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಹೇಳಿದರು.
ಅವರು ಇಂದು , ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ,ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯನ್ನು ಓಡಿಎಫ್+1 ಜಿಲ್ಲೆಯನ್ನಾಗಿ ಘೋಷಿಸಲಾಗಿದ್ದು, ಎಲ್ಲಾ ಗ್ರಾಮ ಪಂಚಾಯತ್ ಗಳು ತಮ್ಮ ವ್ಯಾಪ್ತಿಯಲ್ಲಿನ ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ತಿಳಿಸಿದ ಸಿಇಓ, ಎಸ್ಎಲ್ಆರ್ಎಂ ಘಟಕಗಳು ಕಸದಿಂದ ಆದಾಯವನ್ನು ಸಂಗ್ರಹಿಸಿ, ತಮ್ಮ ವೆಚ್ಚಗಳನ್ನು ನಿಭಾಯಿಸಿಕೊಂಡುವ ಲಾಭದಾಯಕವಾಗಿ ನಡೆಸುವಂತೆ ಹೇಳಿದರು.
ಜಲಜೀವನ್ ಮಿಷನ್ ಯೋಜನೆಯಡಿ ಎಲ್ಲಾ ಮನೆಗಳಿಗೆ ನೀರಿನ ಸಂಪರ್ಕ ಒದಗಿಸಿ, ತಮಗೆ ಈಗಾಗಲೇ ನೀರಿನ ಸಂಪರ್ಕ ಇದೆ, ಈ ಯೋಜನೆಯಡಿ ಸಂಪರ್ಕ ಬೇಡ ಎನ್ನುವ ಕುಟುಂಬಗಳ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ, ಲಿಖಿತ ವರದಿ ಪಡೆದು ಅನಿವಾರ್ಯವಾದಲ್ಲಿ ಮಾತ್ರ ರದ್ದುಗೊಳಿಸಿ, ಯೋಜನೆಯನ್ನು ಅನುಷ್ಠಾನಗೊಳಿಸುವಾಗ ಸಂಬದಪಟ್ಟ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿ, ಸಾರ್ವಜನಿಕರಿಗೆ ಜಲ ಜೀವನ್ ಮಿಷನ್ ಮಹತ್ವದ ಕುರಿತು ಸೂಕ್ತ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ , ಎಲ್ಲಾ ಗ್ರಾಮ ಪಂಚಾಯತ್ ಗಳು 15 ನೇ ಹಣಕಾಸಿನ ಯೋಜನೆಯಡಿ ತಮ್ಮ ಕ್ರಿಯಾ ಯೋಜನೆಯಲ್ಲಿ ಕಡ್ಡಾಯವಾಗಿ ಜಲ ಜೀವನ್ ಯೋಜನೆ ಅನುಷ್ಠಾನಕ್ಕೆ ಅನುದಾನ ಮೀಸಲಿಡಬೇಕು ಈ ಬಗ್ಗೆ ಗ್ರಾಮ ಪಂಚಾಯತ್ ಗಳಿಗೆ ಮತ್ತೊಮ್ಮೆ ಸೂಚನೆ ನೀಡುವಂತೆ ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ತಿಂಗಳಲ್ಲಿ 1 ದಿನ ಜಲಜೀವನ್ ಮಿಷನ್,ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ,ಇಂಗು ಗುಂಡಿಗಳ ಗಳ ಮಹತ್ಬಗಳ , ಪ್ಲಾಸ್ಟಿಕ್ ವಿಲೇವಾರಿ, ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಿ, ಇದಕ್ಕೆ ಸ್ಥಳೀಯ ನಿವೃತ್ತ ಶಿಕ್ಷಕರು, ಮಾಜಿ ಜನಪ್ರತಿನಿಧಿಗಳು , ನಿವೃತ್ತ ಇಂಜನಿಯರಿಂಗ್ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ಅವರ ಮೂಲಕ ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿನ ಶಾಲೆಗಳು ,ಹಾಸ್ಟೆಲ್ ಗಳು ಮತ್ತು ಆಸ್ಪತ್ರೆಗಳಲ್ಲಿ ಇಂಗು ಗುಂಡಿಗಳ ನಿರ್ಮಾಣ ಮಾಡುವ ಕುರಿತಂತೆ ಸಂಬಂದಪಟ್ಟ ಇಲಾಖೆಗಳು ಅಗತ್ಯ ಮಾಹಿತಿ ನೀಡುವಂತೆ ಮತ್ತು ಗ್ರಾಮ ಪಂಚಾಯತ್ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಘಟಕ ಅಳವಡಿಸುವ ಕುರಿತಂತೆ ಮಾಹಿತಿ ನೀಡುವಂತೆ ತಿಳಿಸಿದರು.
ನೀರು ಮತ್ತು ನೈರ್ಮಲ್ಯ ಸಮಸ್ಯೆಗಳ ಕುರಿತು ಸಹಾಯವಾಣಿಗೆ ಬರುವ ದೂರುಗಳನ್ನು ಶೀಘ್ರದಲ್ಲಿ ಇತ್ಯರ್ಥಪಡಿಸುವಂತೆ ಸಿಇಓ ಸೂಚಿಸಿದರು.
ಜಿಲ್ಲಾ ಪಂಚಾಯತ್ ನಿಂದ ಹೊರತಂದ ತ್ಯಾಜ್ಯ ಮುಕ್ತ ಗ್ರಾಮದತ್ತ ನಮ್ಮ ಚಿತ್ತ ಎಂಬ ,ಸ್ವಚ್ಚತೆ , ಜಲಜೀವನ್ ಮಿಷನ್ ಕುರಿತು ಅರಿವು ಮೂಡಿಸುವ ಮಾಹಿತಿ ಪತ್ರವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸರಾವ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಇಂಜಿನಿಯರ್ ಕೃಷ್ಣಾನಂದ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಾಬು ಉಪಸ್ಥಿತರಿದ್ದರು.