ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೀವನ ಎಂಬುದು ಒಂದು ಕ್ರಿಕೆಟ್ ಸ್ಟೇಡಿಯಂ ಇದ್ದ ಹಾಗೆ ಬಾಲ್ ಎನ್ನುವ ಅವಕಾಶಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಬೇಕು. ಮಾತನಾಡುವ ಕಲೆ ನಾಯಕತ್ವದ ಗುಣ, ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಂಡಾಗ ಮಾತ್ರ ನಾವು ಯಶಸ್ವಿ ಜೀವನ ನಡೆಸಲು ಸಾಧ್ಯ. ಎಳವೆಯಲ್ಲೇ ಬದುಕನ್ನು ಎದುರಿಸುವ ಗುಣವನ್ನು ಬೆಳೆಸಿಕೊಳ್ಳಬೇಕೆಂದು ಜೇಸಿಐ ತರಬೇತುದಾರರಾದ ಅಕ್ಷತಾ ಗಿರೀಶ್ ಹೇಳಿದರು.
ಅವರು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೋಟರಿ ಕ್ಲಬ್ ಗಂಗೊಳ್ಳಿ ಹಾಗೂ ರೋಟರ್ಯಾಕ್ಟ್ ಕ್ಲಬ್ ಗಂಗೊಳ್ಳಿ ಸಂಯುಕ್ತ ಆಶ್ರಯದಲ್ಲಿ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಗುಜ್ಜಾಡಿ ಗೋಪಾಲ ನಾಯಕ ರೋಟರಿ ಸಭಾಂಗಣದಲ್ಲಿ ಆಯೋಜಿಸಲಾದ ಜೀವನ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಂಗೊಳ್ಳಿ ರೋಟರಿ ಕ್ಲಬ್ ನ ರಾಜೇಶ್ ಎಂ ಜಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೋಟರ್ಯಾಕ್ಟ್ ಅಧ್ಯಕ್ಷರಾದ ಅಮೀಕ್ಷಾ ಡಿ ನಾಯ್ಕ್ ಹಾಗೂ ಕಾರ್ಯದರ್ಶಿ ರಾಮಕೃಷ್ಣ ಶೆಣೈ ಉಪಸ್ಥಿತರಿದ್ದರು.
ಎನ್.ಎಸ್.ಎಸ್ ಯೋಜನಾಧಿಕಾರಿ ಸುಗುಣ ಆರ್ ಕೆ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸ್ವಯಂ ಸೇವಕಿ ಜಾಹ್ನವಿ ಸ್ವಾಗತಿಸಿದರು. ರಂಜಿತ ಬಿಲ್ಲವ ಅತಿಥಿಯನ್ನು ಪರಿಚಯಿಸಿದರು. ಪೂಜಾ ಡಿ ಪುತ್ರನ್ ಕಾರ್ಯಕ್ರಮ ನಿರ್ವಹಿಸಿದರು. ಮಹಿಮಾ ವಂದಿಸಿದರು.