ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ನ.27: ತಾಲೂಕಿನ ಯಡ್ತರೆ ಸಮೀಪದ ರಾಹುತನಕಟ್ಟೆ ಹಾಗೂ ನಾಕಟ್ಟೆ ಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ನಡೆದ ನಾಲ್ಕು ಪ್ರತ್ಯೇಕ ಅಪಘಾತದಲ್ಲಿ ನಾಲ್ಕು ದನಗಳು ಸಾವನ್ನಪ್ಪಿದ್ದು, ಎರಡು ದನಗಳು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿರುವ ಘಟನೆ ನಡೆದಿದೆ.
ರಾಹುತನಕಟ್ಟೆ ಬಳಿ ಶನಿವಾರ ರಾತ್ರಿ ವೇಳೆಗೆ ಎರಡು ಪ್ರತ್ಯೇಕ ಅಪಘಾತಗಳು ನಡೆದು ಎರಡು ದನಗಳು ಮೃತಪಟ್ಟು ಎರಡು ದನಗಳಿಗೆ ಗಾಯಗಳಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬೈಕ್ ಹಾಗೂ ಕಾರಿಗೆ ದನಗಳು ಅಡ್ಡಬಂದು ಅಪಘಾತ ನಡೆದಿತ್ತು. ದನಗಳಿಗೆ ಸಣ್ಣಪುಟ್ಟ ಗಾಯಗೊಂದಿಗೆ ಪಾರಾಗಿದ್ದವು. ಬೈಕ್ ಹಾಗೂ ಕಾರಿಗೂ ಹಾನಿಯಾಗಿತ್ತು. ಆ ಬಳಿಕ ಮುರ್ಡೇಶ್ವರಕ್ಕೆ ತೆರಳುತ್ತಿದ್ದ ಟೆಂಪೋ ಟ್ರಾವೆಲರ್‌ಗೆ ಎರಡು ದನಗಳು ಅಡ್ಡ ಬಂದು ಡಿಕ್ಕಿ ಹೊಡೆದಿದ್ದು, ಎರಡೂ ದನಗಳೂ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಟಿಟಿ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿತ್ತು.
ನಾಕಟ್ಟೆ ಅಂಬಿಕಾ ಉಪಹಾರ ಹೋಟೆಲ್ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಂದೂರು ಹಾಗೂ ಯಡ್ತರೆ ಕಡೆಗೆ ತೆರಳುವ ಎರಡೂ ಮಾರ್ಗದಲ್ಲಿ ಬೇರೆ ಬೇರೆ ವಾಹನಕ್ಕೆ ಎರಡು ದನಗಳು ಡಿಕ್ಕಿಯಾಗಿ ಸಾವನ್ನಪ್ಪಿದ್ದವು.
ಕತ್ತಲ ಹೆದ್ದಾರಿ – ಬೀಡಾಡಿ ದನಗಳ ಹಾವಳಿ:
ಕೋಟದಿಂದ ಶಿರೂರು ತನಕದ ನವಯುಗ ಹಾಗೂ ಐಆರ್‌ಬಿ ಕಂಪೆನಿಗಳು ಆಯ್ದ ಪ್ರದೇಶಗಳಲ್ಲಷ್ಟೇ ಬೀದಿದೀಪ ಅಳವಡಿಸಿದೆ. ಕೆಲವು ಜನವಸತಿ, ಜನಸಂಚಾರದ ಪ್ರದೇಶಗಳಲ್ಲಿಯೂ ಬೀದಿದೀಪವಿಲ್ಲದೇ ಜನರು, ವಾಹನ ಸವಾರರು ನಿರಂತರ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವೆಡೆ ಬೀದಿ ದೀಪ ಅಳವಡಿಸಿದ್ದರೂ ಸರಿಯಾದ ನಿರ್ವಹಣೆಯೂ ಆಗುತ್ತಿಲ್ಲ. ಅದರ ನಡುವೆ ರಸ್ತೆ ಮೇಲೆಗೆ ನಿಲ್ಲವ ಬೀಡಾಡಿ ದನಗಳಿಂದಾಗಿ ಸಾಕಷ್ಟು ವಾಹನಗಳು ಅಪಘಾತಕ್ಕೀಡಾಗಿ ಪ್ರಾಣಹಾನಿ ಸಂಭವಿಸುತ್ತಲೇ ಇದೆ.
ಈ ಬಗ್ಗೆ ಐಆರ್‌ಬಿ ಹಾಗೂ ನವಯುಗ ಕಂಪೆನಿಯ ಅಧಿಕಾರಿಗಳಿಗೆ ಸಾಕಷ್ಟು ಭಾರಿ ದೂರು ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳ ಸಭೆಗೆ ಹಾಜರಾಗುವ ಎನ್‌ಎಚ್‌ಆರ್‌ಐ ಅಧಿಕಾರಿಗಳು ಕಾರಣ ಕೊಟ್ಟು ಜಾರಿಕೊಳ್ಳುತ್ತಿದ್ದಾರೆ. ಇನ್ನು ಕೊಲ್ಲೂರು ದೇವಳದಿಂದ ನೂತನ ಗೋಶಾಲೆ ತೆರೆಯುವ ವಿಚಾರ ನೆನೆಗುದಿಗೆ ಬಿದ್ದಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ದನ ಅಡ್ಡವಿರಿಸಿ ಪ್ರತಿಭಟನೆ:
ನಿನ್ನೆ ರಾತ್ರಿ ಅಪಘಾತ ನಡೆದಿದ್ದರೂ ಇಂದು ಮಧ್ಯಾಹ್ನದ ತನಕ ದನಗಳನ್ನು ಹಾಗೆ ರಸ್ತೆಯಲ್ಲಿಯೇ ಬಿಟ್ಟಿದ್ದರಿಂದ ಐಆರ್‌ಬಿ ಕಂಪೆನಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೆಲಕಾಲ ಹೆದ್ದಾರಿ ತಡೆದು ಪ್ರತಿಭಟಿಸಿದರು. ಬೈಂದೂರು ಪೊಲೀಸರು ಸ್ಥಳಕ್ಕಾಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬಳಿಕ ಸ್ಥಳಕ್ಕೆ ಬಂದ ಐಆರ್‌ಬಿ ಸಿಬ್ಬಂದಿಗಳು ಎರಡೂ ದನಗಳನ್ನು ಬದಿಗೆ ಸರಿಸಿ ರಸ್ತೆ ಪಕ್ಕದಲ್ಲಿಯೇ ಹೂತು ಹಾಕಿದ್ದಾರೆ.
ಇದನ್ನೂ ಓದಿ:
► ರಾ.ಹೆ-66ರಲ್ಲಿ ಇನ್ನೋವಾ ಡಿಕ್ಕಿಯಾಗಿ ಎರಡು ದನಗಳ ಸಾವು – https://kundapraa.com/?p=44049 .
► ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬುಲೆಟ್ ಬೈಕ್ ಡಿಕ್ಕಿಯಾಗಿ ಸಾವು – https://kundapraa.com/?p=51543 .