ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ 2020-21 ನೇ ಸಾಲಿನ ವಾರ್ಷಿಕ ಮಹಾಸಭೆ ಉಪ್ಪುಂದ ಶಾಲೆಬಾಗಿಲು ಮಾತೃಶ್ರೀ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ವೆಂಕಟರಮಣ ಖಾರ್ವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಸದಸ್ಯರ ಶ್ರೇಯೋಭಿವೃದ್ಧಿಗೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತದೆ. ಸಂಘದ ಸಲಹೆ ಸೂಚನೆಗಳನ್ನು ಸದಸ್ಯರು ಅನುಸರಿಸಬೇಕು ಎಂದ ಅವರು ಕೊಡೇರಿ ಬಂದರಿನ ನಿಧಾನಗತಿಯ ಕಾಮಗಾರಿಕೆ ಆಕ್ಷೇಪ ವ್ಯಕ್ತಪಡಿಸಿ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ವೀನುಗಾರರ ಸಮಸ್ಯೆಗಳಿಗೆ ತ್ವರಿತ ಗತಿಯಲ್ಲಿ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಮೀನುಗಾರಿಕೆ ಸಂದರ್ಭ ಮರಣ ಹೊಂದುವ ಸಂಘದ ಸದಸ್ಯರಿಗೆ ರೂ.5ಲಕ್ಷ ಹಾಗೂ ಇತರೆ ಸಂದರ್ಭದಲ್ಲಿ ರೂ.2ಲಕ್ಷ ಸಹಾಯಧನ ಮತ್ತು ಶೇ.25ರಷ್ಟು ವೈದ್ಯಕೀಯ ವೆಚ್ಚ ಭರಿಸಲು ಹಾಗೂ ದೋಣಿ ಮತ್ತು ಸಲಕರಣೆಗಳಿಗೆ ಶೇ.10ರಷ್ಟು ಪರಿಹಾರ ಧನ ನೀಡುವ ತೀರ್ಮಾನ ಕೈಗೊಳ್ಳಲಾಯಿತು. ಕೊಡೇರಿ ಬಂದರು ನಿಧಾನಗತಿಯ ಕಾಮಗಾರಿ ಮತ್ತು ಹೈಕೋರ್ಟ್‌ನಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ಚರ್ಚೆ ನಡೆಯಿತು. ಉಪ್ಪುಂದ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜನವರಿ ತಿಂಗಳಲ್ಲಿ ಅಭಾರಿ ಸೇವೆ ನಡೆಸುವುದು ಹಾಗೂ ದೋಣಿ ಅವಘಡ ಸಂಭವಿಸಿದ ಸದಸ್ಯರಿಗೆ ನೀಡಲು ಬಾಕಿ ಇರುವ ಮೊತ್ತದ ಕುರಿತು ಹಾಗೂ ಅರೆಕಾಲಿಕ ಮತ್ತು ಪಟ್ಟೆಬಲೆ ದೋಣಿಯಲ್ಲಿ ಮೃತರಾದವರಿಗೆ ಸಹಾಯಧನ ನೀಡುವುದರ ಕುರಿತು, ಅರೆಹಾಡಿ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ರೂ.50ಸಾವಿರ ದೇಣಿಗೆ ನೀಡುವುದು ಹಾಗೂ ಅಮ್ಮನವರತೊಪ್ಪು ಶ್ರೀರಾಮ ಭಜನಾ ಮಂದಿರ ನೂತನ ಕಟ್ಟಡ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡುವುದರ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ 2020-21ನೇ ಸಾಲಿನ ವರದಿ ಹಾಗೂ ಆಯ-ವ್ಯಯ ಪಟ್ಟಿ ವಾಚಿಸಲಾಯಿತು.
ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ತಿಮ್ಮಪ್ಪ ಖಾರ್ವಿ, ಪ್ರಧಾನ ಕಾರ್ಯದರ್ಶಿ ಸುರೇಶ ಖಾರ್ವಿ, ಕೋಶಾಧಿಕಾರಿ ನಾಗೇಶ ಖಾರ್ವಿ, ಜೊತೆ ಕಾರ್ಯದರ್ಶಿ ಸೋಮಶೇಖರ ಖಾರ್ವಿ, ಕಾರ್ಯಕಾರಿ ಸದಸ್ಯರಾದ ಎ. ಶ್ರೀನಿವಾಸ ಖಾರ್ವಿ, ಎಸ್. ಕೃಷ್ಣ ಖಾರ್ವಿ, ರಾಜೇಂದ್ರ ಖಾರ್ವಿ, ಶಂಕರ ಖಾರ್ವಿ, ನವೀನ ಖಾರ್ವಿ, ಶರತ್ ಖಾರ್ವಿ, ಸದಸ್ಯರು ಹಾಗೂ ಸಿಬಂದಿ ವರ್ಗ ಉಪಸ್ಥಿತರಿದ್ದರು.
ರವೀಂದ್ರ ಖಾರ್ವಿ ಪ್ರಾರ್ಥಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿಶೋರ ಸ್ವಾಗತಿಸಿದರು. ಸುಬ್ರಹ್ಮಣ್ಯ ಎಂ. ನಿರೂಪಿಸಿದರು.