ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕುಂದಾಪುರ ಹೊಲಿಕ್ರಾಸ್ ಚರ್ಚ್, ಬಸ್ರೂರು ಫಿಲೀಪ್ ನೇರಿ ಚರ್ಚ್, ತ್ರಾಸಿ ಕ್ರಿಸ್ಟ್ಕಿಂಗ್ ಚರ್ಚ್, ಗಂಗೊಳ್ಳಿ ಅವರ್ ಲೇಡಿ ಆಫ್ ಇಮ್ಯಾಕ್ಯೂಲೇಟ್ ಚರ್ಚ್, ತಲ್ಲೂರು, ಬೆಳ್ವೆ ಜೊಸೆಫ್ ಚರ್ಚ್, ಫ್ರಾನ್ಸಿಸ್ ಆಸಿಸಿ ಚರ್ಚ್, ಬೈಂದೂರು ಹೊಲಿಕ್ರಾಸ್ ಚರ್ಚ್ ಸೇರಿದಂತೆ ವಿವಿಧ ಚರ್ಚುಗಳು ಹಾಗೂ ಕ್ರೈಸ್ತ ಸಮುದಾಯ ಕ್ರಿಸ್ಮಸ್ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.
ಚರ್ಚ್’ಗಳಿಗೆ ಕುಟುಂಬ ಸಮೇತ ತೆರಳಿದ ಕ್ರೈಸ್ತರು, ಯೇಸು ಕ್ರಿಸ್ತನ ಶೀಲುಬೆ ಮುಂದೆ ನಿಂತು ಶ್ರದ್ದಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಚರ್ಚ್ ಆವರಣದಲ್ಲಿ ನಿರ್ಮಿಸಿರುವ ಕಣ್ಮನ ಸೆಳೆಯುವ ಗೋದಲಿಗಳು ವಿದ್ಯುತ್ ದೀಪಾಲಂಕಾರ ಗಮನ ಸೆಳೆಯುತ್ತಿದ್ದವು. ಕ್ರೈಸ್ತರ ಮನೆಗಳಲ್ಲಿ ಸಂಭ್ರಮ ಮನೆಮಾಡಿದ್ದು, ಗೋದಲಿ, ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ.
ಕುಂದಾಪುರ ಚರ್ಚಿನಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಕಥೊಲಿಕ್ ವಿಧ್ಯಾ ಮಂಡಳಿಯ ಕಾರ್ಯದರ್ಶಿಗಳಾದ ವಂ|ಧರ್ಮಗುರು ಅಂಟೋನಿ ಸೆರಾವೊ ಸಂದೇಶ ನೀಡಿದರು. ಪ್ರಧಾನ ಧರ್ಮಗುರುಗಳಾದ ಅ|ವಂ| ಸ್ಟ್ಯಾನಿ ತಾವ್ರೊ, ಕ್ರಿಸ್ಮಸ್ ಹಬ್ಬದ ಭವ್ಯ ಭಕ್ತಿ ಪ್ರಧಾನ ಬಲಿಪೂಜೆಯಲ್ಲಿ ಭಾಗಿಯಾಗಿ ಹಬ್ಬದ ಶುಭಾಶಯಗಳನ್ನು ಕೋರಿದರು. ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಬಲಿದಾನದಲ್ಲಿ ಭಾಗಿಯಾಗಿದ್ದರು.
ಬೈಂದೂರು ಹೊಲಿಕ್ರಾಸ್ ಚರ್ಚ್ನಲ್ಲಿ ರೆ.ಪಾ ವಿನ್ಸೆಂಟ್ ಕುವೆಲ್ಲೊ, ಮಂಗಳೂರು ಸೆಮಿನೇರಿಯಾ ಪ್ರಾಧ್ಯಾಪಕ ರೆ.ಫಾ ಅಂತೋನಿ ಪಿಂಟೋ, ಬ್ರದರ್ ಸ್ಟಿವನ್ ಡಿಸೋಜಾ ಇವರ ನೇತ್ರತ್ವದಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು.