ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯುವತಿಯೋರ್ವಳಿಗೆ ಚೂರಿಯಿಂದ ಇರಿದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದ್ದು, ಅದೃಷ್ಟವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಹೆಸ್ಕತ್ತೂರು ಆಟೋರಿಕ್ಷಾ ಚಾಲಕ ರಾಘವೇಂದ್ರ ಕುಲಾಲ್ ( 35) ಯುವತಿಗೆ ಚೂರಿ ಇರಿದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಮಧ್ಯಾಹ್ನ ಯುವತಿ ಕೆಲಸ ಮಾಡುತ್ತಿದ್ದ ಕಟ್ಟಡದ ಮಹಡಿಗೆ ಊಟಕ್ಕೆ ಹೋದ ಸಂದರ್ಭ ರಾಘವೇಂದ್ರ ಪ್ರವೇಶಿಸಿ ಇರಿಯಲು ಮುಂದಾಗಿದ್ದು, ಹುಡುಗಿ ಕೈ ಅಡ್ಡ ಹಿಡಿದಿದ್ದರಿಂದ ಬಚಾವಾಗಿದ್ದಾಳೆ. ನಂತರ ರಾಘವೇಂದ್ರ ಅಲ್ಲಿಂದ ಪರಾರಿಯಾಗಿ ಹೆಸ್ಕತ್ತೂರು ಹಾರ್ಯಾಡಿಯ ಹಾಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ.
ರಾಘವೇಂದ್ರ ಕುಲಾಲ್ ಚೂರಿ ಇರಿದ ಯುವತಿಗೆ ಹಿಂದಿನಿಂದಲೂ ಕಿರುಕುಳ ನೀಡುತ್ತಿದ್ದು ಕೋಟ ಠಾಣೆಯಲ್ಲಿ ಈ ಹಿಂದೆ ದೂರು ದಾಖಲಾಗಿತ್ತು. ಯುವಕನ ಠಾಣೆಗೆ ಕರೆಯಿಸಿ ಹಿಂಬರಹ ಪಡೆದು ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು. ಅದೇ ದ್ವೇಷದ ಹಿನ್ನೆಲೆಯಲ್ಲಿ ಚೂರಿಯಲ್ಲಿ ಇರಿಯಲಾಗಿದೆ ಎನ್ನಲಾಗಿದೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಬಗ್ಗೆ ಪ್ರಕರಣ ದಾಖಲಾಗಿದೆ.
ಕೆಲ ಸಮಯದ ಹಿಂದೆ ಕಲ್ಯಾಣಪುರದಲ್ಲಿ ನಿಶ್ಚಿತಾರ್ಥ ಆದ ಯುವತಿಗೆ ಚೂರಿಯಿಂದ ಇರಿದಿದ್ದು, ಚೂರಿ ಇರಿತಕ್ಕೆ ಒಳಗಾದ ಯುವತಿ ಮತ್ತು ಯುವಕ ಇಬ್ಬರು ಮೃತಪಟ್ಟ ಘಟನೆ ನಡೆದಿತ್ತು.