ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಮಗ್ರ ಕೃಷಿ ಪದ್ದತಿಯಿಂದ ಯಶಸ್ಸು ಸಾಧ್ಯವಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಹೆಚ್ಚು ಹೆಚ್ಚು ಕೃಷಿ ಕಾಯಕದಲ್ಲಿ ತೋಡಗಿಸಿ ಕೊಳ್ಳುವಂತಾಗಬೇಕು. ಆ ಮೂಲಕ ನಮ್ಮ ದೇಶವನ್ನು ರೈತ ಪ್ರಧಾನ ದೇಶ ಎಂಬುದಾಗಿ ಮತ್ತೊಮ್ಮೆ ಸಾಬೀತು ಪಡಿಸಬೇಕಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಕೃಷಿ ಉಳಿವಿಗಾಗಿ ರೈತ ಬೆಳೆದ ಎಲ್ಲಾ ಬೆಳೆಗಳಿಗೂ ಸರಕಾರವೇ ನಿಗದಿತ ನಿರ್ದಿಷ್ಟ ದರ ನಿಗದಿಪಡಿಸಬೇಕು. ಈ ಮೂಲಕ ರೈತನಿಗೆ ನೈತಿಕವಾಗಿ ಬೆಂಬಲ ಸೂಚಿಸಿದಂತಾಗುತ್ತದೆ ಎಂದು ಯುವ ಸಾಧಕ ಕೃಷಿಕ ರಾಜೇಶ್ ಕಾಂಚನ್ ಕೊರವಡಿ ಹೇಳಿದರು.
ಅವರು ಕೋಟದ ಪಂಚವರ್ಣ ಯುವಕ ಮಂಡಲ ಕೋಟ ಇವರ ನೇತ್ರತ್ವದಲ್ಲಿ ರೈತಧ್ವನಿ ಸಂಘ ಕೋಟ, ಗಿಳಿಯಾರು ಯುವಕ ಮಂಡಲ ಗಿಳಿಯಾರು, ಗೀತಾನಂದ ಫೌಂಡೇಶನ್ ಮಣೂರು, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಮಣೂರು ಫ್ರೆಂಡ್ಸ್ ಮಣೂರು, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇವರ ಸಹಯೋಗದೊಂದಿಗೆ ಬೇಳೂರಿನಲ್ಲಿ ಜರುಗಿದ ೧೨ನೇ ಸರಣಿ ಮಾಲಿಕೆ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಬೇಳೂರಿನ ಯುವ ಸಾಧಕಿ ಕೃಷಿಕೆ ನಿಶಾ ದೇವಾಡಿಗ ಇವರನ್ನು ಸನ್ಮಾನಿಸಿ ಮಾತನಾಡಿದರು.
ಕೋಟ ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ್ ಶೆಟ್ಟಿ ಮಾತನಾಡಿ, ಕೃಷಿ ಕ್ಷೇತ್ರಕ್ಕೆ ಸರಕಾರ ಏಕೆ ರಾಜ್ಯೋತ್ಸವ ಪ್ರಶಸ್ತಿ ನೀಡುವುದಿಲ್ಲ. ಇದರಿಂದ ರೈತ ಸಮುದಾಯ ವಂಚಿತಗೊಂಡಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕೃಷಿ ಕ್ಷೇತ್ರವನ್ನು ಪ್ರಧಾನವನ್ನಾಗಿಸಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅದ್ಯತೆ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಕೃಷಿ ಲಾಭದಾಯಕವಾಗಿಸಲು ಹಲವು ರೀತಿಯ ವಿನೂತನ ಆಧುನಿಕ ಪದ್ದತಿಯನ್ನು ಅನುಸರಿಸಿಕೊಳ್ಳಬೇಕು. ಆಗ ಮಾತ್ರ ಕೃಷಿಯಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ ಎಂಬುದಕ್ಕೆ ಗ್ರಾಮೀಣ ಭಾಗದ ನಿಶಾ ದೇವಾಡಿಗ ಯುವ ಪ್ರತಿಭೆಯೇ ಸಾಕ್ಷಿ ಎಂದರು.
ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ ಅಧ್ಯಕ್ಷತೆ ವಹಿಸಿದ್ದರು. ಬೇಳೂರು ಪರಿಸರದ ಸಾಮಾಜಿಕ ಕಾರ್ಯಕರ್ತ ಸತೀಶ್ ಶೆಟ್ಟಿ ಗುಳ್ಳಾಡಿ, ಪಾಂಡೇಶ್ವರ ರಕ್ತೇಶ್ವರಿ ದೇವಳದ ಧರ್ಮದರ್ಶಿ ಕೆ.ವಿ ರಮೇಶ್ ರಾವ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾಸ್ಕರ್ ಶೆಟ್ಟಿ ಮಣೂರು, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಶ್ರೀಕಾಂತ್ ಶೆಣೈ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇದರ ಭಾರತಿ ಮಯ್ಯ, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ಗಿಳಿಯಾರು ಯುವಕ ಮಂಡಲದ ಗೌರವ ಸಲಹೆಗಾರ ರಾಘವೇಂದ್ರ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರೈತ ಯುವ ಸಾಧಕಿ ಬೇಳೂರು ನಿಶಾ ದೇವಾಡಿಗ ಇವರನ್ನು ಸಂಸ್ಥೆಗಳ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ವಿಪ್ರ ಮಹಿಳಾ ಬಳಗದ ಸುಜಾತ ಬಾಯಿರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪಂಚವರ್ಣ ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.
ಯುವ ಸಾಧಕಿಗೆ ವಿಶೇಷ ಗೌರವರ್ಪಣೆ:
ಇದೇ ಮೊದಲ ಬಾರಿಗೆ ಮಹಿಳಾ ರೈತ ಸಾಧಕಿಯನ್ನು ಗುರುತಿಸಿ ಗೌರವಿಸಲಾಗಿದ್ದು, ಈ ಸಂದರ್ಭದಲ್ಲಿ ಯುವ ಕೃಷಿಕೆಗೆ ಅರಸಿನ ಕುಂಕುಮವನ್ನು ಹಣೆಗಿಟ್ಟು, ಗಲ್ಲಕ್ಕೆ ಸವರಿ, ಸೋಬಾನೆ ಹಾಡು ಹಾಡಿ, ಆರತಿ ಬೆಳಗಿ, ಕೃಷಿ ಪರಿಕರಗಳನ್ನಿಟ್ಟು ಗೌರವಿಸಲಾಯಿತು.