ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಮಹಿಳೆಯರು ಸಬಲರಾದಾಗ ಸಮಾಜದಲ್ಲಿ ಮಹಿಳೆಯರು ಉನ್ನತ ಮಟ್ಟಕ್ಕೇರಲು ಸಾಧ್ಯವಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಸ್ವ ಉದ್ಯೋಗ ಮತ್ತಿತರ ಚಟುವಟಿಕೆಗಳಿಂದ ತೊಡಗಿಸಿಕೊಳ್ಳುವುದು ಅಗತ್ಯ. ಸರಕಾರ ಮಹಿಳೆಯರ ವಿವಿಧ ಕಾರ್ಯಕ್ರಮ, ತರಬೇತಿಗಳನ್ನು ಹಮ್ಮಿಕೊಂಡು ವಿವಿಧ ಯೋಜನೆಗಳ ಮೂಲಕ ಅನುದಾನ ನೀಡುತ್ತಿದೆ. ಇದರ ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಲು ಮಹಿಳೆಯರು ಮುಂದಾಗಬೇಕು ಎಂದು ಉಡುಪಿ ನೆಹರು ಯುವಕೇಂದ್ರದ ಯುವ ಜಿಲ್ಲಾ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿಸೋಜ ಹೇಳಿದರು.
ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ ಮತ್ತು ಮಾರಿಕಾಂಬಾ ಮಹಿಳಾ ಸಹಕಾರಿ ಸಂಘ ಗುಜ್ಜಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರಗಿದ ಉಚಿತ ಟೈಲರಿಂಗ್ ತರಬೇತಿ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಮಾರಿಕಾಂಬಾ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಫಿಲೋಮಿನಾ ಫೆರ್ನಾಂಡಿಸ್, ಚೈತನ್ಯ ಸ್ತ್ರೀ ಶಕ್ತಿ ಒಕ್ಕೂಟದ ಪ್ರ.ಕಾರ್ಯದರ್ಶಿ ಪ್ರೇಮಾ ಮಂಜುನಾಥ, ಗಂಗೊಳ್ಳಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ ಖಾರ್ವಿ, ಹೊಲಿಗೆ ತರಬೇತುದಾರರಾದ ಶಾಂತಿ ಖಾರ್ವಿ, ಸುಮಿತ್ರಾ, ಗಂಗೊಳ್ಳಿ ಗ್ರಾಪಂ ಸದಸ್ಯರು, ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ರೇಖಾ ಖಾರ್ವಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.