ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು. ಇದರಿಂದ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಸನಾತನ ಹಿಂದೂ ಧರ್ಮದ ಆಚಾರ ವಿಚಾರಗಳ ಬಗ್ಗೆ ಅರಿವು ಉಂಟು ಮಾಡುವಲ್ಲಿ ಸಹಕಾರಿಯಾಗುತ್ತದೆ ಎಂದು ಬೆಳ್ವೆ ಸತೀಶ್ ಕಿಣಿ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್‌ನ ಸತೀಶ್ ಕಿಣಿ ಬೆಳ್ವೆ ಹೇಳಿದರು.
ಅವರು ಕೋಟೇಶ್ವರ ಶ್ರೀ ಮಹಾದೇವಿ ಮಾರಿಯಮ್ಮ ದೇವಸ್ಥಾನ ೧೮ನೇ ವರ್ಷದ ಪ್ರತಿಷ್ಠಾವರ್ಧಂತ್ಸುತ್ಸವ ಮತ್ತು ಸಾಂಸ್ಕೃತಿಕ ಸಂಘದ ೩೦ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಕೋಟೇಶ್ವರ ಎನ್.ಆರ್.ಆಚಾರ್ಯ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಎನ್.ಭಾಸ್ಕರ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕೋಟಿಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್, ಶ್ರೀ ಮಹಾದೇವಿ ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷ ರಮೇಶ್ ಜಿ ಪೈ, ಶ್ರೀ ಮಾರಿಯಮ್ಮ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸುಕೇಶ್ ಶೇಟ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವೇದಮೂರ್ತಿ ಪ್ರಸನ್ನಕುಮಾರ ಐತಾಳ್ ಇವರ ನೇತೃತ್ವದ ಪೌರೋಹಿತ್ಯದಲ್ಲಿ ಬ್ರಹ್ಮಕಲಶ ಸಹಿತ ಅಷ್ಟೋತ್ತರ ಶತಕಲಶ ಸ್ಥಾಪನೆ ಕಲಾಭಿವೃದ್ಧಿ ಹೋಮ ಮತ್ತು ಕಲಶಾಭಿಷೇಕ ಜರುಗಿತು. ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಗೋಪಾಲ್ ಬಳೆಗಾರ ಇವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಜನ್ಸಾಲೆ ರಾಘವೇಂದ್ರ ಆಚಾರ್ಯರ ಸಾರಥ್ಯದಲ್ಲಿ ಅತಿಥಿ ಕಲಾವಿದರಿಂದ ಕೃಷ್ಣಾರ್ಜುನ ಯಕ್ಷಗಾನ ಪ್ರದರ್ಶನಗೊಂಡಿತ್ತು. ಸಾಂಸ್ಕೃತಿಕ ಕಾರ‍್ಯಕ್ರಮದ ಅಂಗವಾಗಿ ಯು.ನಾಗರಾಜ್ ಶೇಟ್ ಉಡುಪಿ ಇವರಿಂದ ಭಕ್ತಿ ಸುಗಮ ಸಂಗೀತ ನಡೆಯಿತು
ಪ್ರಾರ್ಥನ ನಾಯಕ್ ಪ್ರಾರ್ಥಿಸಿದರು. ಶೇಖರ ಜೋಗಿ ಸ್ವಾಗತಿಸಿದರು. ಭರತ್ ಎಸ್ ಜೋಗಿ ಕಾರ‍್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಂಘದ ಅಧ್ಯಕ್ಷ ಕೆ ಸುಕೇಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ವಂದಿಸಿದರು.